ಭಾರತೀಯ ರಕ್ಷಣಾ ಪಡೆಯ ಶಕ್ತಿಯೇನೆಂಬುದು ಮೊನ್ನೆ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ ನಿಚ್ಚಳವಾಗಿ ಸಾಬೀತಾಗಿದೆ. ಅಮೆರಿಕ ಹಾಗೂ ಪ್ರಪಂಚದ ಎಲ್ಲ ಅಗ್ರದೇಶಗಳಿಗೆ ಭಾರತದ ಮಿಲಿಟರಿಪಡೆಗಳ ದೈತ್ಯ ಶಕ್ತಿಯ ವಿರಾಟ್‌ರೂಪದ ದರ್ಶನವಾಗಿದೆ.
ಮುನೀರ್ ಬೆದರಿಕೆಗೆ ಭಾರತ ಮಣಿಯದು: ಪಾಕ್ ಮಿಲಿಟರಿ ಮುಖ್ಯಸ್ಥ ಆಸೀಫ್ ಮುನೀರ್, ಭಾರತದ ಮೇಲೆ ಅಣುಬಾಂಬ್ ಪ್ರಯೋಗಿಸುವ ಬೆದರಿಕೆ ಹಾಕಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಎರಡು ಭಾರಿ ಅಮೆರಿಕಕ್ಕೆ ಭೇಟಿ ನೀಡಿದ ಮುನೀರ್ ಪಾಕ್ ಮತ್ತು ಅಮೆರಿಕ ನಡುವಣ ರಹಸ್ಯ ಮಿಲಿಟರಿ ಒಪ್ಪಂದಗಳಿಗೂ ಮುಂದಾಗಿದ್ದಾರೆ. ಮೂರು ದಿನಗಳ ಹಿಂದೆ ಭಾರತೀಯ ವಾಯುಪಡೆ ಮುಖ್ಯಸ್ಥರು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸಮಯದಲ್ಲಿ ಪಾಕಿಸ್ಥಾನಕ್ಕೆ ಸೇರಿದ ಆರು ಸಮರ ವಿಮಾನಗಳನ್ನು ನೆಲಕ್ಕೆ ಉರುಳಿಸಿದ ವಿಷಯವನ್ನು ಬಹಿರಂಗಗೊಳಿಸಿದರು. ಈ ಹೇಳಿಕೆ ಲೋಕಕ್ಕೆ ಬಯಲಾದ ಕೆಲವೇ ತಾಸುಗಳ ಅಂತರದಲ್ಲಿ ಪಾಕ್ ಮಿಲಿಟರಿ ಅಧಿಪತಿ ಪರಮಾಣು ಅಸ್ತ್ರಗಳನ್ನು ಭಾರತದ ಮೇಲೆ ಪ್ರಯೋಗಿಸಲು ತಾನು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿರುವುದು ಗಮನಾರ್ಹ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸಮಯದಲ್ಲಿ ಹೆಚ್ಚೂ ಕಡಿಮೆ ತನ್ನ ಪ್ರಮುಖ ಮಿಲಿಟರಿ ಸ್ಥಾವರಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ಪಾಕ್ ಈಗ, ಭಾರತದ ಮೇಲೆ ಪರಮಾಣು ಯುದ್ಧಕ್ಕೆ ತಯಾರಿದೆ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಒಂದು ಕಡೆ ತನ್ನ ನೆಲದಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಆಸರೆ ನೀಡುವುದರ ಜೊತೆ ಜೊತೆಗೆ, ತನ್ನ ಮಿಲಿಟರಿ ನೆಲೆಗಳ ಮೇಲೆ ಭಾರತೀಯ ರಕ್ಷಣಾ ಪಡೆಗಳು ಧ್ವಂಸಗೊಳಿಸದಂತೆ ತೆರೆಮರೆಯಲ್ಲಿ ನಿಂತು ದೊಡ್ಡನ್ನನಿಗೆ ದುಂಬಾಲು ಬೀಳುವ ಪಾಕ್ ಕಳ್ಳಾಟ ಇಡೀ ಪ್ರಪಂಚಕ್ಕೆ ಗೊತ್ತಾಗದ ವಿಚಾರವಲ್ಲ. ಕಿತ್ತು ತಿನ್ನುವ ಬಡತನ ಮತ್ತು ದಾರಿದ್ರ್ಯ ಮಡಿಲಿನಲ್ಲಿ ಪರಮ ರೋಗಗ್ರಸ್ಥ ದೇಶವಾಗಿರುವ ಪಾಕಿಸ್ಥಾನಕ್ಕೆ ಇಡೀ ಲೋಕವನ್ನು ಗೆಲ್ಲುವ ಪರಮಾಣು ಅಸ್ತ್ರಗಳ ಮಹಾಶಕ್ತಿ ಇದೆ ಎಂದರೆ ಇದನ್ನು ನಂಬಲು ಯಾರೂ ತಯಾರಿಲ್ಲ. ಇದೇ ವೇಳೆ ತನ್ನ ಮೂಲಕವೇ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸ್ಥಗಿತಗೊಂಡಿದ್ದೆಂದು ಹೇಳಿಕೊಳ್ಳುತ್ತಿರುವ ಅಮೆರಿಕ, ಪಾಕಿಸ್ಥಾನದ ಈ ಯುದ್ಧೋನ್ಮಾದದ ಮಾತುಗಳ ಬಗ್ಗೆ ಯಾವುದೇ ಖಚಿತ ಪ್ರತಿಕ್ರಿಯೆ ನೀಡಿಲ್ಲ.
ವಿಶ್ವಶಾಂತಿ ಸ್ಥಾಪಿಸಲು ಡೋನಾಲ್ಡ್ ಟ್ರಂಪ್ ಅವg ಕೊಡುಗೆ ಅಪಾರ ಮತ್ತು ಅನನ್ಯ ಎಂದು ಲೋಕಕ್ಕೆ ಡುಂಗುರ ಸಾರುತ್ತಿರುವ ಪಾಕ್ ಮಿಲಿಟಟಿ ಅಧಿಕಾರಿಯ ಬಾಯಲ್ಲೀಗ ಅಣುಬಾಂಬ್ ಯುದ್ದದ ಮಾತುಗಳು ಉದುರುತಿದ್ದು ಇದು ದ್ಮಿಮುಖ ನೀತಿಯಲ್ಲದೆ ಬೇರೇನೂ ಆಗಿಲ್ಲ, ಒಟ್ಟಿನಲ್ಲಿ ಅಮೆರಿಕದ ಕುಮ್ಮಕ್ಕು ಮತ್ತು ಪರೋಕ್ಷ ಬೆಂಬಲವಿಲ್ಲದೆ ಪಾಕಿಸ್ಥಾನವು ಈ ರೀತಿಯಾಗಿ ಭಾರತದ ಮೇಲೆ ಬಾಯಿ ಹರಡಲು ಸಾಧ್ಯವಿಲ್ಲ. ಪರಮಾಣು ಅಸ್ತ್ರಗಳ ಪ್ರಯೋಗದ ವಿಚಾರ ಅಥವಾ ಬೆದರಿಕೆ ಭಾರತಕ್ಕಿಂದು ಹೊಸದೇನೂ ಅಲ್ಲ. ಇದನ್ನು ಭಾರತ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯೂ ಇಲ್ಲ . ಏಕೆಂದರೆ ಭಾರತದ ರಕ್ಷಣಾ ಪಡೆಯ ಶಕ್ತಿಯೇನೆಂಬುದು ಮೊನ್ನೆ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ ನಿಚ್ಚಳವಾಗಿ ಸಾಬೀತಾಗಿದೆ. ಅಮೆರಿಕ ಹಾಗೂ ಪ್ರಪಂಚದ ಎಲ್ಲ ಅಗ್ರದೇಶಗಳಿಗೂ ಭಾರತದ ಅಸಲೀ ಮಿಲಿಟರಿ ಶಕ್ತಿಯ ವಿಶ್ವರೂಪ ದರ್ಶನವಾಗಿದೆ. ಹೀಗಾಗಿ ಪಾಕಿಸ್ಥಾನವು ತನ್ನ ಬಳಿಯಿರುವ ಪರಮಾಣು ಅಸ್ತ್ರಗಳ ಬಗ್ಗೆ ಬಡಾಯಿ ಕೊಚ್ಚಿದರೂ ಇದಕ್ಕೆ ಬೆದರಿ ಭಾರತೀಯ ರಕ್ಷಣಾ ಪಡೆ ಕೈ ಕಟ್ಟಿ ಸುಮ್ಮನಾಗದು.