” After I die ,if i am burried I will rot .If I am burnt I will become ash .But , if my body is doated I will give life and happiness to many ”
-Amit Abraham
ಪ್ರತಿ ವರ್ಷ ಆಗಸ್ಟ್ 13 ರಂದು ‘ ವಿಶ್ವ ಅಂಗಾಂಗ ದಾನ ದಿನ ‘ವನ್ನು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಾಗೂ ಅಂಗಾಂಗದಾನದ ಪ್ರಾಮುಖ್ಯತೆ ತಿಳಿಸುವ ಸಲುವಾಗಿ ಆಚರಿಸಲಾಗುತ್ತದೆ .ರೋನಾಲ್ಡ್ ಲೀ ಹೆರಿಕ್ ಅಂಗದಾನ ಮಾಡಿದ ಪ್ರಪಂಚದ ಪ್ರಥಮ ವ್ಯಕ್ತಿ. ಅವನು ತನ್ನ ಸಹೋದರನ ಸಲುವಾಗಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ. ವೈದ್ಯ ವಿಜ್ಞಾನಿ ಡಾ.ಜೋಶೆಪ್ ಮುರ್ರೆ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದರು .1990 ರಲ್ಲಿ ಅವರು ನೋಬೆಲ್ ಪ್ರಶಸ್ತಿಗೆ ಭಾಜನರಾದರು .ಅಂಗಾಂಗ ದಾನಕ್ಕೆ ವಯಸ್ಸಿನ ನಿರ್ಬಂಧವಿಲ್ಲ .ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 0.01% ಜನರು ಮಾತ್ರ, ಸತ್ತ ಮೇಲೆ ಅಂಗಾಂಗದಾನ ಮಾಡುವರು .
ಅವನು ಜೀವಂತವಾಗಿದ್ದಾನೆ.ಆದರೆ ,ನೀರಲ್ಲಿ ಮುಳುಗಿ ಸತ್ತ ಹೆಣದಂತೆ ಬಾತಿದ್ದಾನೆ .ಕಣ್ಣು ಹೂತುಕೊಂಡಿವೆ ಮೂತ್ರ ಕಡಿಮೆ. ಉಸಿರಾಟಕ್ಕೆ ಏದುಸಿರು ಬಿಡುತ್ತಿದ್ದಾನೆ ಹಸಿವೆಯಿಲ್ಲ .ವೈದ್ಯರು ವ್ಯಕ್ತಿಯ ತಪಾಸಣೆ ಮಾಡಿ, ಪರೀಕ್ಷೆಯ ವರದಿಗಳನ್ನು ಒರೆಗಚ್ಚಿ ನೋಡಿ ಹೇಳಿದ್ದು ‘ಕಿಡ್ನಿ ಫೆಲ್ಯೂರ್ ‘ಆಗಿವೆ ಎಂದು. ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಂಡರೂ ಈ ಸ್ಥಿತಿ…
ನಾವು ಸೇವಿಸಿದ ಆಹಾರ ಪದಾರ್ಥಗಳನ್ನು ಜೀರ್ಣಿಸಿ , ದೇಹ ನಿರ್ಮಾಣಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಾಚನಿಕ ನಾಳವು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪ್ರತಿಯೊಂದು ಜೀವಕೋಶಗಳು ಉಪಯೋಗಿಸಿಕೊಳ್ಳುತ್ತವೆ .ಬದುಕಲು ಅಗತ್ಯವಾದ ಎಲ್ಲಾ ಜೀವಾಧಾರಕ ಕೆಲಸಗಳನ್ನು ಮಾಡುತ್ತವೆ. ಈ ಕೆಲಸಗಳು ನಡೆಯುವಾಗ ಅನೇಕ ವಿಷವಸ್ತುಗಳು ಹುಟ್ಟುತ್ತವೆ .ಇವು ಅಪಾಯಕಾರಿ ವಸ್ತುಗಳು. ಜೀವ ತೆಗೆಯಬಲ್ಲವು .ಹಾಗಾಗಿ ಉತ್ಪಾದನೆಯಾಗುತ್ತಿರುವಂತೆಯೇ ,ಇವುಗಳ ನಿವಾರಣೆಯೂ ಆಗಬೇಕು. ಈ ಕೆಲಸವನ್ನು ಮೂತ್ರ ಪಿಂಡಗಳು ಮಾಡುತ್ತವೆ .
ಇಂಥ ಅಮೂಲ್ಯ ಅಂಗಗಳು ಹಲವಾರು ಕಾರಣಗಳಿಂದ ದೈನಂದಿನ ಕೆಲಸ ನಿರ್ವಹಿಸಲು ವಿಫಲವಾಗುವವು . ಈ ಸ್ಥಿತಿಯೇ ‘ ಕಿಡ್ನಿ ಫೆಲ್ಯೂರ್ ‘.ಈ ರೋಗಿಗಳಿಗೆ ಇರುವ ದಾರಿಗಳೆಂದರೆ –
1.ನಿಯಮಿತವಾಗಿ ಡಯಾಲಿಸಿಸ್ ಗೆ ಒಳಗಾಗುವುದು . 2.ಸಾವನ್ನು ಸ್ವಾಗತಿಸುವುದು .3.ಬದಲಿ ಮೂತ್ರಪಿಂಡವನ್ನು ಜೋಡಿಸಿಕೊಳ್ಳುವುದು .
ಜೀವಾಧಾರಕ ಮೂತ್ರಪಿಂಡಗಳಿಗೆ ಬೆಲೆ ಕಟ್ಟಲಾಗದು . ಹೀಗಾಗಿ ಆಗಾಗ ‘ ಕಿಡ್ನಿ ಸ್ಕ್ಯಾಂಡಲ್ ‘ನಡೆಯುತ್ತಲೇ ಇರುತ್ತದೆ. ಬಡಬಗ್ಗರಿಗೆ ಆಸೆ ,ಆಮಿಷ ತೋರಿಸಿ ,ಅವರ ಕಿಡ್ನಿಗಳನ್ನು ಕದಿಯೂವರು .ಅವಶ್ಯಕತೆಯಿದ್ದವರಿಗೆ ಲಕ್ಷಾಂತರ ರೂಪಾಯಿಗಳಿಗೆ ಮಾರಿ ಅವರನ್ನು ಬದುಕಿಸುವರು .ಇಲ್ಲಿ ಮಾನವೀಯತೆಯ ಮಾರಣ ಹೋಮವಾಗಿದೆ .ವ್ಯಾಪಾರೀಕರಣ ಕಾಲಿಟ್ಟಿದೆ . ಹಣಗಳಿಸುವ ದಂಧೆಯಾಗಿದೆ .ಮಧ್ಯವರ್ತಿಗಳಿಗೆ , ದಳ್ಳಾಳಿಗಳಿಗೆ ಚಿನ್ನದ ಗಣಿಯಾಗಿದೆ. ಇದೊಂದು ದೊಡ್ಡ
ದುರಂತ !
ವಿಶ್ವದ ಪ್ರಥಮ ಅಂಗ ಜೋಡಣೆ
ವಿಶ್ವದ ಪ್ರಥಮ ಬದಲಿ ಅಂಗ ಜೋಡಣೆಯ ಉದಾಹರಣೆ ಗಜಾನನ ಜನ್ಮ ವೃತ್ತಾಂತ ! ಸಮಸ್ತ ಭಾರತೀಯರಿಗೆಲ್ಲಾ ಚಿರಪರಿಚಿತವಾದದ್ದು .ನಿಜಕ್ಕೂ ಇದೊಂದು ಅದ್ಭುತ ಕಥೆ .ಇದರ ಅಡಿಯಲ್ಲಿ ಅಂಗಗಳ ಬದಲಿ ಜೋಡಣೆಯ ಶಾಸ್ತ್ರ ಇಂದು ಅದ್ಭುತವಾಗಿ ಬೆಳೆದಿದೆ. ಹಾಗೆಂದು ಸಿಕ್ಕ ಸಿಕ್ಕವರ ಅಂಗಗಳನ್ನು ತೆಗೆದು ಅವಶ್ಯವಿದ್ದವರಿಗೆ ಜೋಡಿಸಲು ಬರುವುದಿಲ್ಲ. ಬದಲಿ ಅಂಗ ಜೋಡಣೆಯ ಶಸ್ತ್ರಚಿಕಿತ್ಸೆ ಮಾಡುವ ಪೂರ್ವದಲ್ಲಿ ಅಂಗಗ್ರಾಹಿ ,ಅಂಗದಾನಿಯ ಅಂಗಗಳನ್ನು ಸ್ವೀಕರಿಸುವನೋ ಅಥವಾ ತಿರಸ್ಕರಿಸಿಸುವನೋ ಎಂಬುದನ್ನು ಖಚಿತಪಡಿಸಲು ಹಲವಾರು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ .ಎಲ್ಲವೂ ಸರಿಯಾಗಿದೆ ಎಂಬುದು ಖಾತ್ರಿಯಾದಮೇಲೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ .ಆಗ ಮಾತ್ರ ಅದು ಯಶಸ್ವಿಯಾಗುವುದು .ಮಾನವರ ದೇಹದಲ್ಲಿ ಪ್ರಮುಖ ಅಂಗಗಳೆಲ್ಲಾ (Vital Organs) ಒಂದೊಂದೇ ಇವೆ . ಮೂತ್ರಪಿಂಡಗಳು ಮಾತ್ರ ಎರಡು ಇವೆ .ಒಂದು ಮೂತ್ರಪಿಂಡ ದಾನ ಮಾಡಿದಲ್ಲಿ ಮತ್ತೊಬ್ಬರ ಬಾಳಿಗೆ ಬೆಳಕು ನೀಡಿದಂತಾಗುವುದು.
ಪ್ರತಿ ವರ್ಷ ಆಗಸ್ಟ್ 13 ರಂದು ‘ ವಿಶ್ವ ಅಂಗಾಂಗ ದಾನ ದಿನ ‘ವನ್ನು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಾಗೂ ಅಂಗಾಂಗದಾನದ ಪ್ರಾಮುಖ್ಯತೆ ತಿಳಿಸುವ ಸಲುವಾಗಿ ಆಚರಿಸಲಾಗುತ್ತದೆ .ರೋನಾಲ್ಡ್ ಲೀ ಹೆರಿಕ್ ಅಂಗದಾನ ಮಾಡಿದ ಪ್ರಪಂಚದ ಪ್ರಥಮ ವ್ಯಕ್ತಿ. ಅವನು ತನ್ನ ಸಹೋದರನ ಸಲುವಾಗಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ. ವೈದ್ಯ ವಿಜ್ಞಾನಿ ಡಾ.ಜೋಶೆಪ್ ಮುರ್ರೆ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದರು .1990 ರಲ್ಲಿ ಅವರು ನೋಬೆಲ್ ಪ್ರಶಸ್ತಿಗೆ ಭಾಜನರಾದರು .ಅಂಗಾಂಗ ದಾನಕ್ಕೆ ವಯಸ್ಸಿನ ನಿರ್ಬಂಧವಿಲ್ಲ .ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 0.01% ಜನರು ಮಾತ್ರ, ಸತ್ತ ಮೇಲೆ ಅಂಗಾಂಗದಾನ ಮಾಡುವರು .
ಸಮಸ್ಯೆಯ ಆಳ ಮತ್ತು ಅಗಲ
ಭಾರತದಲ್ಲಿ ಸುಮಾರು ಎರಡು ಲಕ್ಷ ಮಂದಿಗೆ ಕಿಡ್ನಿ, ಎಂಭತ್ತು ಸಾವಿರ ಮಂದಿಗೆ ಯಕೃತ್ ಹಾಗೂ ಅರವತ್ತು ಸಾವಿರ ಹೃದಯದ ಬದಲಿ ಜೋಡಣೆಗೆ ಬೇಡಿಕೆ ಇದೆ . ಆದರೆ, ಇದರ ಪೈಕಿ ಕೇವಲ ಶೇ.5 ರಷ್ಟು ರೋಗಿಗಳಿಗೆ ಬದಲಿ ಅಂಗಾಂಗ ಜೋಡಿಸುವುದು ಸಾಧ್ಯವಾಗಿದೆ . ಅಂಗಾಂಗ ದಾನದ ಅವಶ್ಯವಿರುವ ರೋಗಿ ಮತ್ತು ಅಂದಾಗಗಳ ಲಭ್ಯತೆ ನಡುವೆ ದೊಡ್ಡ ಅಂತರವಿದೆ . .ಶೇ.95 ರೋಗಿಗಳು ಅಂಗ ಅಲಭ್ಯತೆಯಿಂದಾಗಿ ಜೀವ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ .ಎಡ್ವಾಲ್ಡೋ ಲೀಲ್ ಅವರ ಸಂಶೋಧನೆ ಹಾಗೂ ಕೆಲವು ಸಮೀಕ್ಷೆ ಪ್ರಕಾರ ಮೂಢನಂಬಿಕೆ ,ಅರಿವಿನ ಕೊರತೆ ,ಮಿದುಳು ಸಾವಿನ ಬಗೆಗಿನ ತಪ್ಪು ತಿಳುವಳಿಕಗಳು ಅಂಗದಾನದ ಹಿಂಜರಿಕೆಗೆ ಕಾರಣವಾಗಿವೆ .
ಬೇರೆಯವರು ಬದುಕಲು ದಾರಿ
ಆತ್ಮಕ್ಕೆ ಸಾವಿಲ್ಲ ಎನ್ನುತ್ತಾರೆ. ನಿಜವೋ ಹೇಗೆ ಗೊತ್ತಿಲ್ಲ.ಮರಣದ ನಂತರ ನನ್ನ ದೇಹವು ದಾನವಾಗಿ ಒಂದು ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಲಿ ಎಂದು ಘೋಷಿಸುವುದು ಮರಣೋತ್ತರ ದೇಹದಾನ ಅಥವಾ ಶವ ದಾನ ಎಂದು ಕರೆಯಲ್ಪಡು ವುದು . ಮರಣ ಪತ್ರದ ಮೂಲಕ ಈ ಇಚ್ಚೆಯನ್ನು ಪ್ರಕಟಗೊಳಿಸುವುದಾಗಿದೆ. ಇಂಥವರ ಅಮೂಲ್ಯ ಅಂಗಗಳನ್ನು ಸತ್ತ 4 – 6 ತಾಸುಗಳಲ್ಲಿ ಸಂಗ್ರಹಿಸಿ, ಅವಶ್ಯವಿದ್ದವರಿಗೆ ನಿಗದಿತ ವೇಳೆಯೊಳಗೆ ಮರು ಜೋಡಣೆ ಮಾಡಿದಲ್ಲಿ ಸಾವಿನ ಅಂಚಿನಲ್ಲಿದ್ದ ವರು ಸತ್ತವರ ಅಂಗ ಪಡೆದು ಬದುಕಬಲ್ಲರು .ಸತ್ತವರ ಅಂಗಗಳನ್ನು ಮಣ್ಣಲ್ಲಿ ಹೂಳಬೇಡಿ .ಸುಟ್ಟು ಹಾಕಿ ಹಾಳು ಮಾಡಬೇಡಿ .ಅವರ ಅಂಗ ದಾನಮಾಡಿ . ಬೇರೆಯವರು ಬದುಕಲು ದಾರಿ ಮಾಡಿ.
ಅಂಗಾಂಗ ದಾನವೆಂದರೇನು
ಅಂಗಾಂಗ ದಾನದಲ್ಲಿ ಎರಡು ಪ್ರಕಾರಗಳಿವೆ. ಅವೆಂದರೆ–1.ಜೀವಂತ ವ್ಯಕ್ತಿಗಳು ಮಾಡುವ ದಾನ. 2.ಮರಣೋತ್ತರ ಅಥವಾ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳಿಂದ ಆಗುವ ದಾನ.
ಜೀವಂತ ವ್ಯಕ್ತಿಯ ದೇಹದಲ್ಲಿ ಮರುಸೃಷ್ಟಿಯಾಗುವ ಅಂಗಾಂಶಗಳು, ಜೀವಕೋಶಗಳು ಮತ್ತು ದ್ರವ್ಯಗಳನ್ನು ದಾನಮಾಡುವುದು ಮೊದಲನೇ ಪ್ರಕಾರಕ್ಕೆ ಸೇರುತ್ತದೆ. ಉದಾ : ರಕ್ತದಾನ, ವೀರ್ಯದಾನ, ಚರ್ಮದಾನ, ಅಸ್ತಿಮಜ್ಜೆ ದಾನ ಇತ್ಯಾದಿ. ದೇಹದ ಯಾವುದಾದರೂ ಅಂಗ ಅಥವಾ ಭಾಗಗಳನ್ನು ಇನ್ನೊಬ್ಬರಿಗೆ ದಾನ ಮಾಡುವುದೂ ಈ ವಿಧದಲ್ಲಿ ಸೇರಿದೆ. ಉದಾ : ಎರಡು ಕಿಡ್ನಿಗಳಲ್ಲಿ ಒಂದನ್ನು ದಾನಮಾಡುವುದು. ಯಕೃತ್ತಿನ ಸ್ವಲ್ಪ ಭಾಗ ಅಥವಾ ಸಣ್ಣಕರುಳಿನ ಒಂದು ಭಾಗವನ್ನು ದಾನಮಾಡುವುದು ಇತ್ಯಾದಿ.
ಮರಣೋತ್ತರ ಅಥವಾ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಹೃದಯ, ಶ್ವಾಸಕೋಶ, ಸಣ್ಣಕರುಳು, ಕಾರ್ನಿಯಾ, ಮೂಳೆಗಳು, ಹೃದಯದ ಕವಾಟಗಳು, ಮೇದೋಜಿರಕಾಂಗ, ಪಿತ್ತಜನಕಾಂಗ ಇತ್ಯದಿ ಅಂಗಗಳು ಅಥವಾ ಅಂಗಗಳ ಭಾಗಗಳನ್ನು ತೆಗೆದು ಮತ್ತೊಬ್ಬ ರೋಗಿಗೆ ಅಳವಡಿಸುವುದು ಎರಡನೇ ಪ್ರಕಾರಕ್ಕೆ ಸೇರುತ್ತದೆ. ಒಬ್ಬ ವ್ಯಕ್ತಿಯಿಂದ 8 ಜೀವಿಗಳನ್ನು ಉಳಿಸಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳು ಕೃತಕ ಉಸಿರಾಟದ ವ್ಯವಸ್ಥೆಯನ್ನು ತೆಗೆದೊಡನನೆಯೇ ಸಾವನ್ನಪ್ಪುತ್ತಾರೆ. ಅದಕ್ಕೂ ಮುನ್ನ ಹೀಗೆ ಅಂಗಾಂಗ ದಾನ ಮಾಡಿದಲ್ಲಿ, ಮತ್ತೊಬ್ಬ ವ್ಯಕ್ತಿಯಲ್ಲಿ ಮರುಹುಟ್ಟು ಪಡೆಯುತ್ತಾರೆ. ಸತ್ತ ಬಳಿಕವೂ ಮತ್ತೊಬ್ಬರ ಮುಖಾಂತರ ಬದುಕಿರುತ್ತಾರೆ. ಸತ್ತು ಮಣ್ಣಾಗುವ ಹಲವಾರು ಅಂಗಾಂಗಗಳು ಬೇರೊಬ್ಬ ರೋಗಿಯಲ್ಲಿ ಬದುಕಿ ಬಾಳ ಬೆಳಗುತ್ತವೆ.
ಹಿಂದೂಗಳಲ್ಲಿ ದೇಹದಾನ ಪುರಾಣಕಾಲದಲ್ಲಿ ಇತ್ತೆಂಬುದು ಕೇಳಿಬರುತ್ತದೆ .ಮಹಾಋಷಿಗಳಾದ ದಧೀಚಿ ತನ್ನ ದೇಹವನ್ನು ಹಿಂದೂ ಮಹಾ ಕಾರ್ಯಕ್ಕೆ ದಾನ ಮಾಡಿದರು ಎಂಬ ಕಥೆ ಬರುತ್ತದೆ .ಇದರ ಮೇಲಿಂದ ಇಂಥ ಆಚರಣೆ ಧರ್ಮಕ್ಕೆ ವಿರುದ್ಧ ಅಲ್ಲ ಎಂಬುದು ಸ್ಪಟಿಕದಷ್ಟೇ ಸ್ಪಷ್ಟ. ಮೂತ್ರಪಿಂಡ, ಯಕೃತ್ ನ್ನು ದಾನ ಮಾಡಿ ಉಳಿದವರು ಬದುಕುವಂತೆ ಮಾಡಬಹುದು .ಪ್ಲೀಹ (Spleen) ಇಲ್ಲದೆ ಮನುಷ್ಯ ಬದುಕುವನಾದ್ದರಿಂದ ಅದರ ಅಂಗ ಜೋಡಣೆಗೆ ಅಷ್ಟು ಮಹತ್ವ ಕೊಟ್ಟಿಲ್ಲ. ದೇಹದಲ್ಲಿಯ ರಕ್ತವನ್ನು ಸತ್ತ ತಕ್ಷಣ ಹೀರಿ ತೆಗೆದರೆ ಸಾಕಷ್ಟು ರಕ್ತ ದೊರೆತು ರಕ್ತದ ಅಭಾವವೇ ಇಲ್ಲದಂತಾಗುವುದು . ಅಸ್ಥಿಮಜ್ಜೆಯನ್ನು ಹೀರಿ ತೆಗೆದು ಬೇಕಾದ ವ್ಯಕ್ತಿಗಳಿಗೆ ಪೂರಣೆ ಮಾಡಬಹುದು. ಇದರಿಂದ ರಕ್ತದ ಕ್ಯಾನ್ಸರ್ ಆಗಿ ಮರಣ ಶಯ್ಯೆಯಲ್ಲಿರುವ ರೋಗಿಗಳಿಗೆ ಜೀವದಾನ ಮಾಡಿದಂತಾಗುವುದು .
ಇನ್ನೂ ಮುಂದೆ ಹೋಗಿ ಶವಗಳ ದೇಹದಲ್ಲಿಯ ಎಲಬುಗಳನ್ನು ತೆಗೆದು ರೋಗಿಗಳಿಗೆ ಕೃತ್ರಿಮ ಎಲುಬುಗಳ ಬದಲಾಗಿ ದೈವದತ್ತ ಎಲಬುಗಳನ್ನು ಜೋಡಿಸಬಹುದು .ಇಂದಿನ ಅಪಘಾತ ಯುಗದಲ್ಲಿ ಎಲುಬು ಕಸಿ ಮಾಡುವಿಕೆ ಬಹಳೇ ಮಹತ್ವ ಪಡೆಯುತ್ತಿದೆ .ಇನ್ನೂ ಒಂದು ಮಹತ್ವದ ಹೆಜ್ಜೆಯನ್ನು ಇಂದು ಇಡಬೇಕಾಗಿದೆ .ಅದೆಂದರೆ ಮೇಲಿನ ತ್ವಚೆಯು ಇಂದು ಹಾಳಾಗುತ್ತಿದೆ .ಈ ತ್ವಚೆಯನ್ನು ಉಪಯೋಗಿಸಲು ಪ್ರಯತ್ನಗಳು ನಡೆದಿವೆ. ಒಂದು ವೇಳೆ ಇದು ಸಾಧ್ಯವೆಂದಾದರೆ ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ದೊಡ್ಡ ಪರಿಹಾರ ದೊರೆತಂತಾಗುವುದು .ಸುಟ್ಟು ಹೋದ ಚರ್ಮವನ್ನು ತೆಗೆದು ಹೊಸ ಆರೋಗ್ಯವಂತ ಚರ್ಮವನ್ನು ಅಲ್ಲಿ ಕಸಿ ಮಾಡಿದರೆ ಮರುದಿನವೇ ರೋಗಿ ಗುಣವಾಗುತ್ತಾನೆ . ಸುಟ್ಟ ಅಂಗಿಯನ್ನು ಕಳೆದು ಒಗೆದು ಹೊಸ ಅಂಗಿಯನ್ನು ತೊಟ್ಟಂತೆ ಆಗುವುದು. ಇಂಥ ಇನ್ನೂ ಹತ್ತಾರು ಉಪಯೋಗಗಳಿಂದ ಅದ್ಭುತ ಸಾಧನೆಗಳು ಆಗಬಹುದು ! ವೈದ್ಯರು ,ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಅಂಗಾಂಗದಾನದ ಪ್ರಚಾರ ಆಂದೋಲನದಲ್ಲಿ ಭಾಗಿಯಾಗಿ ಮತ್ತು ಅಂಗದಾನ ಮಾಡಿ ಇತರರಿಗೆ ಮಾದರಿಯಾಗಬೇಕು .
ಅಂಗ ಕಸಿಗೆ ಆಯ್ಕೆ ಹೇಗೆ ?
* ಅಂಗ ಕಸಿಯ ಸಾಮಾನ್ಯ ಯಶಸ್ಸು ರೋಗಿಯ ಮನೋದೈಹಿಕ ಆರೋಗ್ಯವನ್ನು ಅವಲಂಬಿಸಿರುತ್ತದೆ . ಹೀಗಾಗಿ ಬದಲಿ ಜೋಡಣೆಗೆ ಸೂಕ್ತ ರೋಗಿಗಳನ್ನು ವೈದ್ಯರು ಆರಿಸಿಕೊಳ್ಳುತ್ತಾರೆ .
* ಯಾವದೇ ಕಾರಣದಿಂದ ಶಸ್ತ್ರಚಿಕಿತ್ಸೆಯ ಒತ್ತಡವನ್ನು ಭರಿಸಲಾಗದು .ಶಸ್ತ್ರಚಿಕಿತ್ಸೆಯ ಕಾರಣ ಜೀವಕ್ಕೆ ಅಪಾಯ ಬರಬಹುದಾದಂತಹ ರೋಗಿಗಳನ್ನು ವೈದ್ಯರು ಅಂಗಕಸಿ ಚಿಕಿತ್ಸಗೆ ನಿರಾಕರಿಸಬಹುದು .
* ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಸಹ ವೈದ್ಯರು ಈ ಚಿಕಿತ್ಸೆಗೆ ನಿರಾಕರಿಸಬಹುದು.
* ವೈದ್ಯರು ದಾನಿಯ ಅಥವಾ ಗ್ರಾಹಿಯ HLA ವ್ಯೂಹವನ್ನು ತಿಳಿದುಕೊಳ್ಳುತ್ತಾರೆ .ಏಕೆಂದರೆ ಮಾನವನ ದೇಹದ ಮಿಲಿಟರಿ ಪಡೆ ಕಸಿ ವೈಫಲ್ಯಕ್ಕೆ ಕಾರಣವಾಗಬಹುದು .ಈ ಮಿಲಿಟರಿ ಪಡೆಯನ್ನು ನಿಗ್ರಹಿಸಿ ಕಸಿ ಊರ್ಜಿತಗೊಳಿಸಲು ದುಬಾರಿ ಔಷಧಗಳನ್ನು ಬಳಸುವುದು ಅನಿವಾರ್ಯವಾಗಬಹುದು .ಈ ಔಷಧಗಳ ಪರಿಣಾಮ ತಡೆದುಕೊಳ್ಳುವ ಶಕ್ತಿ ರೋಗಿಗೆ ಇರಬೇಕು .
* ನೀರಿನಲ್ಲಿ ಮುಳುಗಿ ಸತ್ತವರಿಂದ ,ವೈರಸ್ ರೋಗಗಳಿಂದ ಸತ್ತವರಿಂದ ( ಮಿದುಳು ಜ್ವರ ,ಹುಚ್ಚು ನಾಯಿ ಕಡಿತ ,ರಕ್ತ ನಂಜು ,ಹಾಡ್ಜ್ ಕಿನ್ ರೋಗ , ಯಕೃತ್ ಉರಿಯೂತ, ಲಿಂಪೋಸಾರ್ಕೋಮ, ಹೆಪಟೈಟಿಸ್- ಬಿ ,ಏಡ್ಸ್ ಇತ್ಯಾದಿ) ಅಂಗಾಂಗಗಳನ್ನು ಸ್ವೀಕರಿಸುವುದಿಲ್ಲ .
ದುರ್ಬಲರಿಗೆ ದುರ್ಲಭ
ಭಾರತವು ಅಂಗಾಂಗ ಕಸಿಯಲ್ಲಿ ಭಾರಿ ಪ್ರಗತಿ ಸಾಧಿಸಿದೆ. ಹೊರದೇಶಗಳಿಂದಲೂ ಅಂಗಾಂಗ ಕಸಿಗಾಗಿ ರೋಗಿಗಳು ಭಾರತಕ್ಕೆ ಬರುತ್ತಿದ್ದಾರೆ. 2024 ರಲ್ಲಿ 39 ವಿವಿಧ ದೇಶಗಳ ರೋಗಿಗಳು ಅಂಗಾಂಗ ಕಸಿಗಾಗಿ ಭಾರತಕ್ಕೆ ಭೇಟಿ ನೀಡಿದ್ದರು ಎಂದು ‘ ಇಂಡಿಯನ್ ಸೊಸೈಟಿ ಆಫ್ ಆರ್ಗನ್ ಟ್ರಾನ್ಸಪ್ಲಾಂಟೇಷನ್ ‘ಹೇಳಿದೆ. ಆದರೂ, ಭಾರತದಲ್ಲಿ ಅಸಮಾನತೆ ಅಧ್ಯಯನಗಳಲ್ಲಿ ಕಂಡು ಬಂದಿದೆ. ಅಂಗಾಂಗ ಕಸಿಯ ತಂತ್ರಜ್ಞಾನ ಜಗತ್ತಿನಾದ್ಯಂತ ಅನೇಕ ಜೀವಗಳನ್ನು ಉಳಿಸುತ್ತಿದೆ. ಆದಾಗ್ಯೂ ಈ ವಲಯದಲ್ಲಿ ಕೆಲವು ಸಮಸ್ಯೆಗಳು. ಅಂತರಗಳು ಹಾಗೆಯೇ ಉಳಿದಿವೆ. ಜಗತ್ತಿನಾದ್ಯಂತ ಶೋಷಿತ ಜನಾಂಗಗಳು, ಸಮುದಾಯಗಳು, ವ್ಯಕ್ತಿಗಳು ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಮಟ್ಟದಲ್ಲಿ ಇರುವವರಿಗೆ ಅಂಗಾಂಗ ಕಸಿ ಸೌಲಭ್ಯ ಮತ್ತು ತಂತ್ರಜ್ಞಾನ ಅಲಭ್ಯವಾಗಿಯೇ ಉಳಿದಿದೆ. ಭಾರತದಲ್ಲಿಯೂ ಪುರುಷ – ಮಹಿಳೆ, ನಗರ- ಗ್ರಾಮೀಣ, ಸರ್ಕಾರಿ – ಖಾಸಗಿ ಆಸ್ಪತ್ರೆಗಳ ನಡುವೆ ಅಂತರಗಳಿರುವುದು ‘ ದಿ ಲ್ಯಾನ್ಸೆಟ್ ‘ಅಧ್ಯಯನದಲ್ಲಿ ಕಂಡು ಬಂದಿದೆ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದರೆ, ಅದಕ್ಕೆ ತಕ್ಕಂತೆ ನೀತಿ ನಿರೂಪಣೆ ಮಾಡಬೇಕು ಎಂದು ವರದಿ ಹೇಳಿದೆ.
ಎಲ್ಲರಿಗೂ ಅಂದರೆ ದೇಶದಲ್ಲಿ ಎಲ್ಲ ವರ್ಗ, ಪ್ರದೇಶಗಳ ಜನರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದರೆ, ಅದಕ್ಕೆ ತಕ್ಕಂತೆ ಆಸ್ಪತ್ರೆಗಳ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿಯಮಾವಳಿಗಳನ್ನು ರೂಪಿಸಬೇಕು ಎಂದು ವರದಿ ಪ್ರತಿಪಾದಿಸಿದೆ. ಅನೇಕ ಭಾರತೀಯರು, ಮುಖ್ಯವಾಗಿ ಬಡವರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಜೀವ ಉಳಿಸಲು ನೆರವಾಗುವಂಥ ಅಂಗಾಂಗ ಕಸಿಯಿಂದ ದೂರ ಉಳಿದಿದ್ದು, ಸರಕಾರವು ಇವರಿಗೂ ಕಸಿ ಸೌಲಭ್ಯ ಕಲ್ಪಿಸದಿದ್ದರೆ ಈ ಅಸಮಾನತೆ ಹೀಗೆಯೇ ಮುಂದುವರಿಯಲಿದೆ ಎಂದು ವರದಿ ಹೇಳಿದೆ.
ಮರಣದ ನಂತರ ಮುಕ್ತಿ ಸಿಗುತ್ತದೆಂಬುದನ್ನೇ ತಾತ್ವಿಕವಾಗಿ ಒಪ್ಪದ ಬೌದ್ಧ ಧರ್ಮ ಇಹಲೋಕದಲ್ಲಿರುವಷ್ಟು ಕಾಲ ನರ ಜೀವಿಗೆ ಕಾಯಾ – ವಾಚಾ – ಮನಸಾ ಲೇಸನೇ ಬಯಸುವ ಮನೋವೈಶಾಲ್ಯಕ್ಕೆ ಪರಮ ಸಾಕ್ಷಿ. ಮರಣದ ನಂತರವೂ ಕೂಡಾ ಈ ದೇಹದಿಂದ ಯಾರ ಬದುಕಲ್ಲಾದರೂ ಬೆಳಕು ಮೂಡುತ್ತದೆ ಎಂದಾದರೆ ಅತ್ತ ಧಾವಿಸುವ ಮನೋವೃತ್ತಿ ಈ ಬೌದ್ಧ ಧರ್ಮದ್ದು , ಮರಣಾನಂತರ ನೀಡುವ ಅಂಗಗಳಿಂದ ಕತ್ತಲ ಜಗತ್ತಿನಲ್ಲಿ ತಡವರಿಸುತ್ತಿರುವ ಜೀವಕ್ಕೆ ಬದುಕು ದೊರೆಯುತ್ತ ದಾದರೆ ನಾವು ಇಂದೇ ಇಂಥ ಮಾನವೀಯ ನಿರ್ಧಾರ ಮಾಡಬಾರದೇಕೆ ? ” ಇಂದು ಯಾರೊಬ್ಬರ ನಗುವಿಗೆ ಕಾರಣನಾಗು ?” ವರ್ಷದ ಘೋಷವಾಕ್ಯವಾಗಿದ್ದು ಅಂಗಾಂಗ ದಾನದ ನಿರ್ಣಾಯಕ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಮತ್ತು ಅಂಗಾಂಗ ದಾನಿಗಳಾಗಿ ಪರಿಗಣಿಸಲು ವ್ಯಕ್ತಿಗಳನ್ನು ಪ್ರೇರೇಪಿಸುತ್ತದೆ .
– ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ. 587201, ಜಿಲ್ಲಾ : ಬಾಗಲಕೋಟೆ