ಕಲಬುರಗಿ: ಜಮೀನಿನ ದಾರಿ ವಿವಾದ ಬಗೆಹರಿಸಿಕೊಳ್ಳಲು ತಂದೆಯೊಬ್ಬ ವಿಕಲಚೇತನ ಮಗಳನ್ನು ಕೊಲೆಗೈದು, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ಸಬ್ ಅರ್ಬನ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಜಿಲ್ಲೆಯ ಕಲ್ಲಹಂಗರಗಾ ಗ್ರಾಮದಲ್ಲಿ 17 ವರ್ಷದ ಮಂಜುಳಾಳನ್ನು ಕೊಲೆಗೈದಿದ್ದ ತಂದೆ ಗುಂಡೇರಾವನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಲ್ಲಹಂಗರಗಾ ಗ್ರಾಮದಲ್ಲಿ ಕೊಲೆ ಪ್ರಕರಣ ವರದಿಯಾಗಿ ಪ್ರಾಥಮಿಕವಾಗಿ ಠಾಣೆಗೆ ಕರೆ ಬಂದಿದ್ದು, 17 ವರ್ಷದ ಬಾಲಕಿ ನೇಣು ಬಿಗಿದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಸಂಶಯಾಸ್ಪದ ರೀತಿಯಲ್ಲಿ ಸಾವು ಕಂಡುಬಂದಿತ್ತು ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ತಿಳಿಸಿದರು.
ಸ್ಥಳದಲ್ಲಿ ಡೆತ್ ನೋಟ್ ಕೂಡ ದೊರೆತಿದೆ. ಮೃತಳು ಪಾರ್ಶ್ವವಾಯು ಬಾಧಿತಳು ಹಾಗೂ ವಿಕಲಚೇತನೆಯಾಗಿದ್ದಾಳೆ. ಹಾಗಾಗಿ, ನಾವು ಅಲ್ಲಿನ ಸ್ಥಳೀಯ ಮಾಹಿತಿಯನ್ನು ಕಲೆ ಹಾಕಿದೆವು. ಅಲ್ಲದೆ, ಬೆರಳಚ್ಚು ತಜ್ಞರ ತಂಡ ಹಾಗೂ ಫೋರೆನ್ಸಿಕ್ ತಂಡದಿಂದ ಪರಿಶೀಲನೆ ನಡೆಯಿತು ಎಂದು ತಿಳಿಸಿದರು.
ಮಗಳ ಕೊಲೆ ಬಯಲು:
ಘಟನೆ ಬಗ್ಗೆ ಮೃತರ ತಾಯಿ ದೂರು ನೀಡಿದ್ದರು. ತಮ್ಮ ಕುಟುಂಬಕ್ಕೆ ಪಕ್ಕದ ಜಮೀನಿನವರ ಜೊತೆ ಸುಮಾರು ವರ್ಷಗಳಿಂದ ವಾಗ್ವಾದವಿದೆ. ಅವರು ಹೊಲಕ್ಕೆ ಹೋಗಲು ದಾರಿ ಬಿಡುತ್ತಿಲ್ಲ. ಹಾಗಾಗಿ, ಅವರೇ ಏನಾದರೂ ಮಾಡಿರಬಹುದು ಎಂದು ಕೊಲೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಸ್ಥಳೀಯ ಎಸಿಪಿ, ಇನ್ಸ್ಪೆಕ್ಟರ್ ಹಾಗೂ ಅವರ ತಂಡ ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಗಳ ತನಿಖೆ ಸೇರಿದಂತೆ, ಎಲ್ಲಾ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದರು. ಬಳಿಕ ತನಿಖೆಯಲ್ಲಿ, ಮೃತಳ ತಂದೆಯೇ ಮಗಳನ್ನು ಕೊಲೆಯನ್ನು ಮಾಡಿರುವುದು ಬಯಲಾಗಿದೆ ಎಂದು ಡಾ.ಶರಣಪ್ಪ ವಿವರಿಸಿದರು.
ಮೃತಳ ತಂದೆ ಗುಂಡೇರಾವ ಕೃಷಿಕನಾಗಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ, ಜಮೀನು ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲೆಂದು ವಿಕಲಚೇತನ ಮಗಳನ್ನು ಬಳಸಿಕೊಂಡಿರುವುದು ತಿಳಿದುಬಂದಿದೆ. ಡೆತ್ನೋಟ್ ಕೂಡ ಆತನೇ ಬರೆದಿದ್ದು, ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಪಕ್ಕದ ಜಮೀನವರು ಎಂದು ಉಲ್ಲೇಖಿಸಲಾಗಿದೆ. ಮಗಳನ್ನು ಆತ್ಮಹತ್ಯೆಗೆ ತಂದೆಯೇ ಮನವೊಲಿಸಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಆರೋಪಿ ಗುಂಡೇರಾವನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ತಿಳಿಸಿದರು


