ಸ್ಪಿನ್ನರ್ ಕುಲದೀಪ್ ಯಾದವ್ ಚುರುಕಿನ ದಾಳಿ ನೆರವಿನಿಂದ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸದಂತೆ ಭಾರತ ನೋಡಿಕೊಂಡಿತು. ಈ ಮೂಲಕ ಸಮಬಲ ಸಾಧಿಸಿದೆ.
ಗುವಾಹತಿಯಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ದಕ್ಷಿಣ ಆಫ್ರಿಕಾ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 81.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿದೆ.
ದಕ್ಷಿಣ ಆಫ್ರಿಕಾದ ಯಾವುದೇ ಬ್ಯಾಟ್ಸ್ ಮನ್ ಗಳು ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ತಂಡದ ಪರ ಬ್ಯಾಟ್ಸ್ ಮನ್ ಗಳು ಹೋರಾಟ ನಡೆಸಿದರೂ ನಿಯಮಿತವಾಗಿ ವಿಕೆಟ್ ಬಿಟ್ಟುಕೊಟ್ಟರು.
ಏಡಿಯನ್ ಮರ್ಕರಂ (38) ಮತ್ತು ರಿಯಾನ್ ರಿಕಲ್ಟನ್ (32) ಮೊದಲ ವಿಕೆಟ್ ಗೆ 82 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಇವರಿಬ್ಬರು ಔಟಾದ ನಂತರ ಸ್ಟಬ್ಸ್ ಮತ್ತು ಭುವಮಾ ತಂಡವನ್ನು ಮುನ್ನಡೆಸಿದರು.
ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ 112 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 49 ರನ್ ಬಾರಿಸಿದ್ದಾಗ ಕುಲದೀಪ್ ಗೆ ವಿಕೆಟ್ ಒಪ್ಪಿಸಿ 1 ರನ್ ನಿಂದ ಅರ್ಧಶತಕ ವಂಚಿತರಾದರು. ನಾಯಕ ಟೆಂಬಾ ಭವುಮಾ 92 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 41 ರನ್ ಗಳಿಸಿದರು.
ಟೋನಿ ಡೆ ಜೊರ್ಸಿ (28) ಮತ್ತು ಸೆನ್ಸುರನ್ ಮುತ್ತುಸ್ವಾಮಿ (ಅಜೇಯ 25) ತಂಡವನ್ನು ಕುಸಿತದಿಂದ ಪಾರು ಮಾಡಿದರು. ಭಾರತದ ಪರ ಸ್ಪಿನ್ನರ್ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು.


