Menu

ಕೋಲಾರ, ಚಿಕ್ಕಬಳ್ಳಾಪುರಕ್ಕೆ 2027 ಮಾರ್ಚ್‌ಗೆ  ಎತ್ತಿನಹೊಳೆ ನೀರು: ಡಿಕೆ ಶಿವಕುಮಾರ್

ಕೋಲಾರ, ಚಿಕ್ಕಬಳ್ಳಾಪುರಕ್ಕೆ 2027 ಮಾರ್ಚ್ ವೇಳೆಗೆ ಎತ್ತಿನಹೊಳೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್  ವಿಧಾನಸಭೆಯಲ್ಲಿ ಹೇಳಿದ್ದಾರೆ. ಶಾಸಕ ವೆಂಕಟಶಿವಾರೆಡ್ಡಿ  ಮಂಡಿಸಿದ್ದ ಗಮನ ಸೆಳೆಯುವ ಸೂಚನೆಗೆ ಅವರು ಉತ್ತರಿಸಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡಿತ್ತು. ನಾವು ವಿಶೇಷ ಆದ್ಯತೆ ನೀಡಿ ನೀರನ್ನು ಹೊರಕ್ಕೆ ತಂದಿದ್ದೇವೆ. ಅವರ ನಾಯಕರು ಈ ಯೋಜನೆಯಲ್ಲಿ ನೀರು ಬರುವುದೇ ಇಲ್ಲ ಎಂದು ಹೇಳುತ್ತಿದ್ದರು. ಆದರೆ ನಾವು ನೀರು ತಂದಿದ್ದೇವೆ. ಈಗ ತುಮಕೂರಿನವರೆಗೂ ಈ ನೀರನ್ನು ತರಬೇಕಾಗಿದ್ದು, ಅಲ್ಲಿ ಸಮತೋಲಿತ ಜಲಾಶಯ ನಿರ್ಮಿಸಬೇಕಾಗಿದೆ. ಇದಕ್ಕೆ ಅರಣ್ಯ ಇಲಾಖೆಗೆ ಬದಲಿ ಜಮೀನು ನೀಡುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ ತುಮಕೂರಿನವರೆಗೂ ನೀರು ತರುತ್ತೇವೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ತೆಗೆದುಕೊಂಡು ಹೋಗುವ ಕಾಮಗಾರಿಗಳು ಬಾಕಿ ಇದ್ದವು. ಇಲ್ಲಿಯೂ ಪೈಪ್ ಅಳವಡಿಕೆಗೆ ಅನುಮತಿ ನೀಡಿದ್ದೇವೆ. ನಮ್ಮ ನಾಯಕರು ಸೇರಿದಂತೆ ಸ್ಥಳೀಯ ಶಾಸಕರು ಸೇರಿ ಅಲ್ಲಿ ಪೂಜೆ ಸಲ್ಲಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು. ಈ ಮಧ್ಯೆ ಕೊರಟಗೆರೆಯಲ್ಲಿ ಆಕ್ಷೇಪ ಇದ್ದ ಕಾರಣ ಪರಮೇಶ್ವರ್ ಅವರ ಜೊತೆ ಚರ್ಚಿಸಿ ಅದನ್ನು ಬಗೆಹರಿಸಿದ್ದೇವೆ” ಎಂದು ವಿವರಿಸಿದರು.

ಈ ವೇಳೆ ಮಾತನಾಡಿದ ಶಾಸಕ ವೆಂಕಟಶಿವಾರೆಡ್ಡಿ ಅವರು “ಮೊದಲು ನಮಗೆ ಆದ್ಯತೆ ನೀಡಿ, ಆನಂತರ ಹಾಸನ, ತುಮಕೂರಿಗೆ ನೀರು ನೀಡಿ” ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಹಾಸನ ಹಾಗೂ ತುಮಕೂರಿನವರೂ ಕೂಡ ಈಗಲೇ ನೀರು ಕೇಳುತ್ತಿಲ್ಲ. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಿ, ಆನಂತರ ನಮಗೆ ನೀಡಿ ಎನ್ನುತ್ತಿದ್ದಾರೆ. ಈ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ನಮ್ಮ ಮೊದಲ ಆದ್ಯತೆ” ಎಂದರು.

ಯೋಜನೆಯನ್ನು 2026-27ನೇ ಸಾಲಿನಲ್ಲಿ 31.03.2027ರ ಅಂತ್ಯಕ್ಕೆ ಶೀಘ್ರವಾಗಿ ಪೂರ್ಣಗೊಳಿಸಿ ನೀರು ಹರಿಸಲು ಉದ್ದೇಶಿಸಲಾಗಿದ್ದು, ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶದಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಭಾಗಗಳಿಗೆ ಯಶಸ್ವಿಯಾಗಿ ನೀರನ್ನು ಹರಿಸಲು ಅನುಕೂಲವಾಗುವಂತೆ ಕೋಲಾರ ಗುರುತ್ವ ಪೈಪ್‌ಲೈನ್ ಪ್ಯಾಕೇಜ್-॥&IV ಹಾಗೂ ಕೋಲಾರ ಫೀಡರ್ ಪೈಪ್‌ಲೈನ್ ಪ್ಯಾಕೇಜ್- V&VI ಮತ್ತು ಶ್ರೀನಿವಾಸಪುರ ಫೀಡರ್ ಪೈಪ್‌ಲೈನ್ ಪ್ಯಾಕೇಜ್-1 ರಿಂದ 1ರ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಸರ್ಕಾರದ ಪತ್ರ ದಿನಾಂಕ:16.05.2025ರಲ್ಲಿ ಅನುಮೋದನೆ ನೀಡಲಾಗಿರುತ್ತದೆ. ಈ 7 ಪ್ಯಾಕೇಜ್ ಕಾಮಗಾರಿಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದ್ದು, ಸದರಿ ಪ್ಯಾಕೇಜ್ ಕಾಮಗಾರಿಗಳನ್ನು ಅಕ್ಟೋಬರ್ 2025ರ ಮಾಹೆಯಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ವಿವರಿಸಿದರು.

ಪೀರಾಪುರ ಏತ ನೀರಾವರಿ

ಶಾಸಕ ಅಪ್ಪಾಜಿ ಸಿ.ಎಸ್ ನಾಡಗೌಡ ಅವರು ಬೂದಿಹಾಳ-ಪೀರಾಪುರ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗಮನ ಸೆಳೆವ ಸೂಚನೆ ಮೂಲಕ ಪ್ರಸ್ತಾಪ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ , ಈ ಕಾಮಗಾರಿ 90% ಮುಕ್ತಾಯವಾಗಿದ್ದು, ಮೊದಲನೇ ಹಂತದಲ್ಲಿ ಈ ಯೋಜನೆಗೆ ಸಂಬಂಧಿಸಿದ ರೈಸಿಂಗ್ ಮೇನ್ ಮತ್ತು ಡೆಲಿವರಿ ಚೇಂಬರ್ ನಿರ್ಮಾಣದ ಕಾಮಗಾರಿಯನ್ನು ಟರ್ನ್ ಕೀ ಆಧಾರದ ಮೇಲೆ ಟೆಂಡ‌ರ್ ಕರೆದು ಕಡಿಮೆ ದರ ನಮೂದಿಸಿದ ಗುತ್ತಿಗೆದಾರರಾದ ಮೆ॥ ಅಮೃತಾ ಕನ್ಸಕ್ಷನ್ಸ್ ಪ್ರೈವೆಟ್ ಲಿಮಿಟೆಡ್ ಹಾಗೂ ಪ್ರತಿಭಾ ಇಂಡಸ್ಟ್ರೀಜ್ ಲಿ. (ಜೆ.ವಿ.) ಇವರಿಗೆ ರೂ.523.03 ಕೋಟಿಗಳಿಗೆ (ಜಿ.ಎಸ್.ಟಿ. ಹೊರತುಪಡಿಸಿ) 24 ತಿಂಗಳುಗಳ ಕಾಲಾವಧಿ ನೀಡಿ ಗುತ್ತಿಗೆ ವಹಿಸಲಾಗಿರುತ್ತದೆ. ಇನ್ನು ಸ್ವಲ್ಪ ಕಾಮಗಾರಿ ಬಾಕಿ ಉಳಿದಿದೆ ಎಂದರು.

ಯೋಜನೆಯಡಿ 20,243 ಹಕ್ಟೇರ್ ಅಚ್ಚುಕಟ್ಟು ಕ್ಷೇತ್ರಕ್ಕೆ ಹೊಲಗಾಲುವೆ ನಿರ್ಮಾಣ ಕಾಮಗಾರಿಯ ವಿವರವಾದ ಯೋಜನಾ ವರದಿ (DPR) ತಯಾರಿಸುವ ಸಲುವಾಗಿ ಸಮಾಲೋಚಕರನ್ನು ನೇಮಿಸುವ ಕಾರ್ಯಕ್ಕೆ ರೂ.1.75 ಕೋಟಿ ಮೊತ್ತಕ್ಕೆ ದಿನಾಂಕ: 06.08.2025ರಂದು ಟೆಂಡರ್ ಕರೆಯಲಾಗಿದ್ದು, ಸಮಾಲೋಚಕರಿಂದ ಡಿಪಿಆರ್ ಪಡೆದ ನಂತರ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು, ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ‘ಯಾವುದೇ ಯೋಜನೆ ತಡವಾಗಲು ಭೂಸ್ವಾಧೀನ ಪ್ರಕ್ರಿಯೆ ಕಾರಣವಾಗಿದೆ’ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ “ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಸಾವಿರಾರು ಪ್ರಕರಣಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಇತ್ತೀಚೆಗೆ ಈ ವಿಚಾರವಾಗಿ ಸಂಪೂರ್ಣ ವರದಿ ಸಿದ್ಧಪಡಿಸಲಾಗುತ್ತಿದೆ. ಇದು ಸರಿಯಾದ ನಂತರ ನಾವು ಕಾಮಗಾರಿ ಕೈಗೊತ್ತಿಕೊಳ್ಳುತ್ತೇವೆ. ಅದಕ್ಕಾಗಿಯೇ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಕರೆಯಲಾಗಿದೆ. ಶಾಸಕರ ಕಳಕಳಿ ಅರಿತು ಸೂಕ್ತ ಕ್ರಮ ಕೈಗೊಳ್ಳುತ್ತೇನೆ” ಎಂದರು.

Related Posts

Leave a Reply

Your email address will not be published. Required fields are marked *