ಸುಪಾರಿ ಕೊಟ್ಟು ಗಂಡನ ಕೊಲೆ ಮಾಡಿಸಿ ಸಹಜ ಸಾವು ಎಂದು ಬಿಂಬಿಸಿದ್ದ ಪತ್ನಿ ಹಾಗೂ 5 ಮಂದಿ ಸಹಚರರ ಕೊಲೆ ರಹಸ್ಯ 7 ವರ್ಷಗಳ ನಂತರ ಬಯಲಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದ ಬೀರಪ್ಪನ್ನು ಪತ್ನಿ ಶಾಂತಾಬಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಳು.
ಅಸಹಜ ಸಾವು ಎಂದು ಬಿಂಬಿಸಿ ಹೆಂಡತಿ ಮತ್ತು ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದು, ಏಳು ವರ್ಷಗಳ ಬಳಿಕ ದುಡ್ಡಿನ ವಿಷಯದಲ್ಲಿ ಆಡಿದ ಮಾತುಗಳು ವೈರಲ್ ಆಗಿ ಅಸಹಜ ಸಾವಿನ ಹಿಂದಿನ ಕೊಲೆ ರಹಸ್ಯ ಬಯಲಾಗಿದೆ.
ಕೊಲೆ ಮಾಡಿದ್ದಕ್ಕಾಗಿ ಸುಪಾರಿ ನೀಡಿದ್ದ ಶಾಂತಾಬಾಯಿ ಹಣ ಕೊಡದೆ ಆಟವಾಡಿಸುತ್ತಿದ್ದಳು. ಈ ಬಗ್ಗೆ ಕೊಲೆ ಮಾಡಿದ ಸುಪಾರಿ ಹಂತಕರು ಪೋನ್ ಮಾಡಿ ಮಾತನಾಡಿದ್ದ ವೀಡಿಯೋ ವೈರಲ್ ಆಗಿತ್ತು.
ಕೊಲೆ ಆರೋಪಿ ಮಹೇಶ್ ಪೋನ್ನಲ್ಲಿ ಮಹಿಳೆ ಜೊತೆ ಮಾತಾಡಿರುವ ವೀಡಿಯೋ ವೈರಲ್ ಆಗಿದ್ದರ ಬೆನ್ನಲ್ಲೇ ಬೀರಪ್ಪ ಸಹೋದರ ಕೊಲೆ ದೂರು ದಾಖಲಿಸಿದ್ದಾರೆ. ಕೊಲೆ ದೂರಿನ ಸಂಬಂಧ ಬೀರಪ್ಪನ ಹೆಂಡತಿ ಶಾಂತಾಬಾಯಿ, ಮಹೇಶ್, ಸುರೇಶ್, ಸಿದ್ದು, ಶಂಕರ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.


