ನನಗೆ ರಾಜಕೀಯವಾಗಿ ಪುನಶ್ಚೇತನ ನೀಡಿದ್ದು, ಡಿಕೆ ಶಿವಕುಮಾರ್. ಅವರ ಮೇಲೆ ನನ್ನ ಋಣ ಇದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜಕೀಯ ಕೊಟ್ಟವರು ಡಿಕೆ ಶಿವಕುಮಾರ್. ಲಾಭ ನಷ್ಟದ ಪ್ರಶ್ನೆ ಇಲ್ಲ. ಇರುವ ಸತ್ಯವನ್ನು ಹೇಳಿದ್ದೇನೆ ಎಂದರು.
ಅಧಿಕಾರ ಹಂಚಿಕೆ ಬಗ್ಗೆ ನನಗೇನೂ ಗೊತ್ತಿಲ್ಲ. ಶಾಸಕರ ಜೊತೆ ಈ ಬಗ್ಗೆ ಚರ್ಚೆ ನಡೆದಿಲ್ಲ. ಅಧಿಕಾರ ಹಂಚಿಕೆ ಗೊಂದಲವನ್ನು ಪಕ್ಷದ ಹೈಕಮಾಂಡ್ ಎರಡು ದಿನಗಳಲ್ಲಿ ಬಗೆಹರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಹೈಕಮಾಂಡ್ ಮೊದಲೇ ತಮ್ಮ ನಿಲುವನ್ನ ಸ್ಪಷ್ಟಪಡಿಸಬೇಕಿತ್ತು. ಅಧಿಕಾರ ಹಂಚಿಕೆ ವಿಚಾರದಲ್ಲಿ ಸ್ಪಷ್ಟಪಡಿಸಬೇಕಿತ್ತು. ಅದು ತಡವಾಗಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಒಪ್ಪಂದ ಆಗಿದೆಯೋ? ಇಲ್ಲವೋ ಗೊತ್ತಿಲ್ಲ ಎಂದು ಅವರು ಹೇಳಿದರು.
ಅಧಿಕಾರ ಹಂಚಿಕೆ ಗೊಂದಲ ಎರಡುವರೆ ವರ್ಷದಿಂದ ಮುಂದುವರೆದಿದೆ. ಅದು ಅಪಾಯಕಾರಿ ಹಂತ ತಲುಪುವ ಎಲ್ಲಾ ಲಕ್ಷಣ ಕಾಣುತ್ತಿದೆ. ಆದಷ್ಟು ಬೇಗ ಹೈಕಮಾಂಡ್ ತನ್ನ ನಿರ್ಧಾರ ಹೇಳಲಿದೆ ಈ ಎಲ್ಲಾ ಬೆಳವಣಿಗೆಯಿಂದ ಪಕ್ಷಕ್ಕೇನು ನಷ್ಟ ಇಲ್ಲ. ಆದರೆ ಗೊಂದಲ ಆಗಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಹೈಕಮಾಂಡ್ ನಾಯಕರ ಬಳಿ ಮಾತುಕತೆ ನಡೆದ ಸಂದರ್ಭದಲ್ಲಿ ಯಾರು ಇರಲಿಲ್ಲ. ಯಾರು ಮಾತು ಕೊಟ್ಟಿದ್ದಾರೆ? ಯಾರು ಮಾತು ಕೊಟ್ಟಿಲ್ಲ? ಯಾರು ಮಾತು ತಪ್ಪಿದ್ದಾರೆಂದು ಮಾತುಕತೆ ವೇಳೆ ಇದ್ದವರಿಗೆ ಗೊತ್ತು. ಕಾಂಗ್ರೆಸ್ ಶಾಸಕರ ಮುಂದೆ ಅಧಿಖಾರ ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.


