Saturday, November 22, 2025
Menu

ಕಠಿಣ ಸವಾಲು ಎದುರಿಸಿ ಪಕ್ಷ ಕಟ್ಟಿದ್ದೇವೆ; ಮುಂದೆಯೂ ಕಟ್ಟುತ್ತೇವೆ: ಹೆಚ್.ಡಿ. ದೇವೇಗೌಡ ಗುಡುಗು

hd devegowda

ಬೆಂಗಳೂರು: ಅದೆಷ್ಟೋ ಕಠಿಣ ಸವಾಲುಗಳನ್ನು ಎದುರಿಸಿ ನಾವು ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇವೆ. ಮುಂದೆಯೂ ಇಂಥಹ ಸವಾಲುಗಳನ್ನು ಮೆಟ್ಟಿನಿಂತು ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ. ಯಾರಿಗೂ ಯಾವ ರೀತಿಯ ಅನುಮಾನ ಬೇಕಿಲ್ಲ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದರು.

ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ನಮ್ಮ ಪಕ್ಷವನ್ನು ಬಹಳಷ್ಟು ನಾಯಕರು ಬಿಟ್ಟು ಹೋಗಿದ್ದಾರೆ. ಈಗಿನ ಕರ್ನಾಟಕದ ಮುಖ್ಯಮಂತ್ರಿ ಸೇರಿ. ನಮ್ಮ ಪಕ್ಷದಿಂದಲೇ ರಾಜಕೀಯ ಬದುಕು ಕಂಡುಕೊಂಡು ಸರ್ವರೀತಿಯಲ್ಲಿಯೂ ಶಕ್ತಿ ತುಂಬಿಕೊಂಡು ಬಿಟ್ಟು ಹೋದರು. ಆದರೂ ಬಹಳ ಸವಾಲಿನ ನಡುವೆ ಪಕ್ಷವನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದೇವೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ನಮ್ಮ ಪಕ್ಷದ ರಾಜ್ಯ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಸಲ ಇಬ್ಭಾಗವಾಗಿದೆ. ನಮ್ಮ ಪಕ್ಷಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗಟ್ಟಿ ನೆಲೆ ಇದೆ. ಬಲಿಷ್ಠವಾಗಿ ಕಟ್ಟಬಹುದು. ಯಾವುದೇ ಅಂಜಿಕೆ ಇಲ್ಲದೆ ನಾವು ಪಕ್ಷವನ್ನು ಕಟ್ಟುತ್ತಾ ಹೋಗುತ್ತೇವೆ ಎಂದು ಅವರು ಶಪಥ ಮಾಡಿದರು.

ನಾವು ಕೆಲವು ವರ್ಷಗಳಿಂದ ವಿವಿಧ ಪಕ್ಷಗಳ ಜತೆ ಅಧಿಕಾರ ಹಂಚಿಕೊಂಡಿದ್ದಾರೆ.ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜತೆ ಸೇರಿ ಕರ್ನಾಟಕದಲ್ಲಿ ಅಧಿಕಾರ ನಡೆಸಿದ್ದಾರೆ. ಅವರು ಎರಡು ಸಲ ಮುಖ್ಯಮಂತ್ರಿ ಆಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಅವರು ಸಾಲಮನ್ನಾ ಸೇರಿದಂತೆ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.

ಕುಮಾರಸ್ವಾಮಿ ಅವರಿಗೆ ಆಡಳಿತದಲ್ಲಿ ಅಗಾಧವಾದ ಅನುಭವ ಇದೆ. ಈಗ ನರೇಂದ್ರ ಮೋದಿ ಅವರ ಕೇಂದ್ರ ಸರಕಾರದಲ್ಲಿ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ದೇವೇಗೌಡರು ಹೇಳಿದರು.

ದೇವೇಗೌಡರ ತ್ಯಾಗ ದೊಡ್ಡದು ಎಂದ ಕೇಂದ್ರ ಸಚಿವರು:

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು; ಪಕ್ಷವನ್ನು ಕಟ್ಟಲು ದೇವೇಗೌಡ ಅವರು ಅನುಭವಿಸಿದ ಕಷ್ಟ ಅವರಿಗಷ್ಟೇ ಗೊತ್ತು. ಅವರ ತ್ಯಾಗವನ್ನು ನಾವು ಲಘುವಾಗಿ ಪರಿಗಣಿಸಬಾರದು. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣವನ್ನು ಬಲಿಷ್ಠವಾಗಿ ಸಂಘಟಿಸಿದವರು ದೇವೇಗೌಡರೇ ಆಗಿದ್ದಾರೆ ಎಂದು ಒತ್ತಿ ಹೇಳಿದರು.

ದೇವೇಗೌಡರು ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಹಾಗೆಯೇ ಎಷ್ಟು ಜನ ನಾಯಕರನ್ನು ಬೆಳೆಸಿದರು, ಎಷ್ಟು ಸಮುದಾಯಗಳಿಗೆ ಶಕ್ತಿ ತುಂಬಿದರು ಎಂಬ ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯ ಇಲ್ಲ. ಈ ಪಕ್ಷದಲ್ಲಿ ರಾಜಕೀಯ ಜನ್ಮ ಪಡೆದು ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ಬೇರೆ ಪಕ್ಷಕ್ಕೆ ಜಂಪ್ ಮಾಡಿ ವ್ಯಕ್ತಿ, ನನ್ನ ರಾಜಕೀಯ ಉದ್ಧಾರಕ್ಕೆ ಮತ್ತೊಬ್ಬರು ಕಾರಣರು ಅಂತ ಕೋಲಾರದಲ್ಲಿ ಹೇಳಿದ್ದರು. ನಿನ್ನೆ ಚಾಮರಾಜನಗರದಲ್ಲಿ ಇದೇ ವ್ಯಕ್ತಿ ನಾನು ಜೆಡಿಎಸ್ ನಲ್ಲಿ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಎರಡು ಸಲ ಡಿಸಿಎಂ ಮಾಡಿದ್ದು ಯಾರು? ನಾವು ಅವರನ್ನು ಡಿಸಿಎಂ ಮಾಡದೇ ಇಲ್ಲದಿದ್ದರೆ ಕಾಂಗ್ರೆಸ್ ಮೂಸಿ ನೋಡುತ್ತಿರಲಿಲ್ಲ ಎಂದು ಕೇಂದ್ರ ಸಚಿವರು ಟೀಕಿಸಿದರು.

ಪಕ್ಷ ಸಂಘಟನೆಯಲ್ಲಿ ಉದಾಸೀನ ಮಾಡುವ ಹಾಗಿಲ್ಲ. ಜಿಲ್ಲಾಧ್ಯಕ್ಷರು ಕಠಿಣವಾಗಿ ಕೆಲಸ ಮಾಡಬೇಕು. ಸಂಘಟನೆಯ ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಉಳಿದಂತೆ ಹರಿಯಾಣ, ದೆಹಲಿ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು.

ಅಲ್ಲದೆ, ರಾಜ್ಯದ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿ ಆಹ್ವಾನಿತ ನಾಯಕರು ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published. Required fields are marked *