ಹಾವೇರಿ: ಮೆಕ್ಕೆಜೋಳ ಖರೀದಿಸು ವಿಚಾರದಲ್ಲಿ ರಾಜ್ಯ ಸರ್ಕಾರ ಪೋಸ್ಟ್‌ಮನ್ ಕೆಲಸ ಮಾಡುತ್ತಿದ್ದು, ಇವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ರೈತರ ಬೇಡಿಕೆಯಂತೆ ಪ್ರತಿ ಕ್ವಿಂಟಾಲ್‌ಗೆ 3000 ರೂ. ಕೊಟ್ಟು ಮೆಕ್ಕೆಜೋಳ ಖರೀದಿ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ದೇಶಕ್ಕೆ ಎಷ್ಟು ಮೆಕ್ಕೆಜೋಳ ಬೇಕೊ ಅದರ ಆಧಾರದ ಮೇಲೆ ರಫ್ತಾಗುತ್ತದೆ. ಈ ವರ್ಷ ಕರ್ನಾಟಕದಲ್ಲಿ 17ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಬೆಳೆದಿದ್ದಾರೆ. ಈ ವರ್ಷ ಕನಿಷ್ಠ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಅದಕ್ಕಂತೂ ರಾಜ್ಯ ಸರ್ಕಾರ ಪರಿಹಾರ ಕೊಡುವುದಿಲ್ಲ. ಮುಖ್ಯಮಂತ್ರಿಗಳು ರೈತರ ವಿಚಾರದಲ್ಲಿ ಕೇವಲ ಪೋಸ್ಟ್‌ಮನ್ ಕೆಲಸ ಮಾಡುತ್ತಿದ್ದಾರೆ.
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ರಾಜ್ಯ ಸರ್ಕಾರದಿಂದ ಖರೀದಿ ಮಾಡಿದ್ದರು. ಅವರು ಕೇಂದ್ರದ ಕಡೆಗೆ ಬೆರಳು ಮಾಡಿರಲಿಲ್ಲ. ಇದೇನು ಹಾಳಾಗುವ ಬೆಳೆ ಅಲ್ಲ. ಅದನ್ನು ಇಟ್ಟುಕೊಂಡು ಬೆಲೆ ಬಂದಾಗ ಮಾರಾಟ ಮಾಡಬಹುದು. ವ್ಯತ್ಯಾಸ ಬಂದರೆ ಕೇಂದ್ರ ಸರ್ಕಾರ ಕೊಡುತ್ತದೆ. ಆದ್ದರಿಂದ ರೈತರ ಬೇಡಿಕೆಯಂತೆ ಎಂಎಸ್‌ಪಿ 2400 ರೂ. ಇದೆ. ರೈತರ ಬಗ್ಗೆ ಕಳಕಳಿ, ಪ್ರೀತಿ ಇದ್ದರೆ ಇನ್ನೂ 600 ಸೇರಿಸಿ ಪ್ರತಿ ಕ್ವಿಂಟಾಲ್‌ಗೆ 3000 ರೂ. ಕೊಟ್ಟು ಖರೀದಿಸಿಲಿ ಎಂದು ಒತ್ತಾಯಿದರು.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಮಾತ್ರ ಪ್ರಸ್ತಾಪ ಆಗಿರುವ ಕುರಿತು ಕೇಳಿದ ಪ್ರಶ್ನೆಗೆ ಇದು ರಾಜ್ಯ ಸರ್ಕಾರ ಅಲ್ಲಾ, ಪೋಸ್ಟ್ ಆಫೀಸ್ ಆಗಿದೆ ಎಂದು ಆರೋಪಿಸಿದರು.


