ಬೆಂಗಳೂರು: ನನ್ನ ರಕ್ತದಲ್ಲೇ ಗುಂಪುಗಾರಿಕೆ ಇಲ್ಲ. ನಾನು ಯಾವುದೇ ಬಣದ ನಾಯಕ ಅಲ್ಲ. ನಾನು 140 ಜನ ಶಾಸಕರ ಅಧ್ಯಕ್ಷ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಶಾಸಕರು ದೆಹಲಿಗೆ ಹೋದ ವಿಚಾರಕ್ಕು ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವು ಶಾಸಕರು ಹಾಗೂ ಸಚಿವರು ದೆಹಲಿಗೆ ಭೇಟಿ ನೀಡಿರುವುದು ಗೊತ್ತು.ಮುಖ್ಯಮಂತ್ರಿಗಳು ಸಚಿವ ಸಂಪುಟ ಪುನರಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳು ಹೋಗಿದ್ದಾರೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ಶಾಸಕರು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದು ಸಾಮಾನ್ಯ. ಈ ಕಾರಣಕ್ಕೆ ಅವರು ದೆಹಲಿಗೆ ಹೋಗಿರಬಹುದು. ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಹೋದರೆ ತಪ್ಪೇನು? ಈ ಹಿಂದೆ ಕೆಲ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ದೆಹಲಿಗೆ ಹೋಗಿದ್ದಾರೆ. ನಾನು ಯಾರನ್ನು ದೆಹಲಿಗೆ ಕರೆದುಕೊಂಡು ಹೋಗಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಹೈಕಮಾಂಡ್ ಹೇಳಿದಂತೆ ಕೇಳುತ್ತಾರೆ. ಮುಖ್ಯಮಂತ್ರಿಗಳು ಅವರ ವಿಚಾರಧಾರೆಯನ್ನು ಹೇಳಿದ್ದಾರೆ. ನಾನೇ 5 ವರ್ಷ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ . ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.


