ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಭಾರತದ ಕೋಲ್ಕತಾದಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದ್ದು, ಬಾಂಗ್ಲಾದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
ಬಾಂಗ್ಲಾದೇಶದ ರಾಜಧಾನಿ ಢಾಕಾದ ನರ್ಸಿಂಗ್ ಗುಡಿಯಿಂದ 14 ಕಿ.ಮೀ. ದೂರದಲ್ಲಿ ಬೆಳಿಗ್ಗೆ 10.08ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, 6 ಮಂದಿ ಅಸುನೀಗಿದ್ದಾರೆ.
ಢಾಕಾದಲ್ಲಿ ಭೂಕಂಪನ ಸಂಭವಿಸಿದ ವೇಳೆ ಮಹಡಿಯ ಮೇಲ್ಫಾವಣಿಯಲ್ಲಿದ್ದ ಮೂವರು ಜಾರಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮತ್ತೆ ಮೂವರು ಕಟ್ಟಡದಿಂದ ಬಿದ್ದು ಅಸುನೀಗಿದ್ದಾರೆ.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲೂ ಭೂಕಂಪನದ ಅನುಭವ ಜನರಿಗೆ ಆಗಿದ್ದು, ಜನರು ಭೀತಿಯಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದಕ್ಷಿಣ ಮತ್ತು ಉತ್ತರ ದಿನಾಜ್‌ಪುರ ಮತ್ತು ಕೂಚ್ ಬೆಹಾರ್ ಸೇರಿದಂತೆ ಪಶ್ಚಿಮ ಬಂಗಾಳದ ಇತರ ಭಾಗಗಳಲ್ಲಿ ಹಾಗೂ ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಕಂಪನದ ಅನುಭವವಾಗಿದೆ.
ಪಾಕಿಸ್ತಾನ ಭೂಕಂಪ
ಪಾಕಿಸ್ತಾನದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಹೇಳಿಕೆ ತಿಳಿಸಿದೆ.
10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಆಳವಿಲ್ಲದ ಭೂಕಂಪಗಳು ಸಾಮಾನ್ಯವಾಗಿ ಆಳವಾದ ಭೂಕಂಪಗಳಿಗಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಆಳವಿಲ್ಲದ ಭೂಕಂಪಗಳಿಂದ ಬರುವ ಭೂಕಂಪನ ಅಲೆಗಳು ಮೇಲ್ಮೈಗೆ ಪ್ರಯಾಣಿಸಲು ಕಡಿಮೆ ದೂರವನ್ನು ಹೊಂದಿರುತ್ತವೆ, ಇದರ ಪರಿಣಾಮವಾಗಿ ಬಲವಾದ ಭೂ ಕಂಪನ ಮತ್ತು ರಚನೆಗಳಿಗೆ ಹೆಚ್ಚಿನ ಹಾನಿ ಮತ್ತು ಹೆಚ್ಚಿನ ಸಾವುನೋವುಗಳು ಸಂಭವಿಸುತ್ತವೆ.


