ಶಿವಮೊಗ್ಗದ ಸೋಗಾನೆಯಲ್ಲಿರುವ ಜೈಲಿಗೆ ಬಾಳೆಗೊನೆಯಲ್ಲಿ ಗಾಂಜಾ ಮತ್ತು ಸಿಗರೇಟ್ ಅನ್ನು ಕೈದಿಗಳಿಗೆ ಸರಬರಾಜು ಮಾಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದ್ದು, ಜೈಲು ಸಿಬ್ಬಂದಿಯೇ ಬೆಚ್ಚಿ ಬಿದ್ದಿದಾರೆ.
ಆಟೋ ಚಾಲಕನೊಬ್ಬ ಸೋಗಾನೆ ಜೈಲಿನ ಮುಖ್ಯ ಗೇಟ್ ಬಳಿ ಬಂದು ಜೈಲು ಕ್ಯಾಂಟೀನ್ಗೆ ಬೇಕಾದ ಬಾಳೆಗೊನೆ ಎಂದು ಹೇಳಿ ದೊಡ್ಡ ಗೊನೆಯನ್ನು ಇಳಿಸಿದ್ದಾನೆ. ಆದರೆ ಜೈಲು ಸಿಬ್ಬಂದಿಗೆ ಸ್ವಲ್ಪ ಅನುಮಾನ ಬಂದಿದ್ದರಿಂದ ಕೆ.ಎಸ್.ಐ.ಎಸ್.ಎಫ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡವನ್ನು ಕರೆಸಿ ಬಾಳೆಗೊನೆಯನ್ನು ಸಂಪೂರ್ಣ ಪರಿಶೀಲಿಸಲಾಗಿದೆ. ಪರಿಶೀಲನೆ ನಡೆಸಿದಾಗ ಬಾಳೆಗೊನೆಯಿದ್ದ ದಿಂಡನ್ನು ಚಾಕುವಿನಿಂದ ಕೊರೆದು ಒಳಗೆ ಗಾಂಜಾ ಪ್ಯಾಕೆಟ್ಗಳು ಮತ್ತು ಸಿಗರೇಟ್ಗಳನ್ನು ತುಂಬಿಸಲಾಗಿತ್ತು. ಒಟ್ಟು 25,000 ರೂ ಮೌಲ್ಯದ 120 ಗ್ರಾಂ ಗಾಂಜಾ ಮತ್ತು 40 ಸಿಗರೇಟ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಜೈಲು ಕ್ಯಾಂಟೀನ್ನವರು ಫೋನ್ ಮಾಡಿ ಈ ಬಾಳೆಗೊನೆ ತರಲು ಹೇಳಿದ್ದರು. ನನಗೆ ಒಳಗೆ ಏನಿದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾನೆ. ಆದರೆ ಪೊಲೀಸರು ನಂಬದೇ ಆತನ ಮೊಬೈಲ್ ಕಾಲ್ ಡೀಟೇಲ್ಸ್ ಪರಿಶೀಲಿಸಿದಾಗ ಕಳೆದ ಒಂದು ವಾರದಿಂದ ಜೈಲಿನೊಳಗಿನ ಕೈದಿಯ ಮನೆಯವರ ಜೊತೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಗೊತ್ತಾಗಿದೆ.
ಬಾಳೆಗೊನೆ ಬಗ್ಗೆ ಯಾರೂ ಅನುಮಾನ ಪಡುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ದುಷ್ಕರ್ಮಿಗಳು ಇಂತಹ ಕೆಲಸ ಮಾಡಿದ್ದಾರೆ. ನಮ್ಮ ಸಿಬ್ಬಂದಿ ಎಚ್ಚರಿಕೆಯಿಂದ ಡ್ರಗ್ಸ್ ಒಳಗೆ ಹೋಗುವುದನ್ನು ತಡೆದಿರುವುದಾಗಿ ಜೈಲು ಸೂಪರಿಂಟೆಂಡೆಂಟ್ ರಾಜಣ್ಣ ತಿಳಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, NDPS ಆಕ್ಟ್ ಮತ್ತು ಕರ್ನಾಟಕ ಪ್ರಿಸನ್ ಆಕ್ಟ್ ಅಡಿ ಕೇಸ್ ದಾಖಲಿಸಲಾಗಿದೆ. ಆಟೋ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಜೈಲಿನೊಳಗೆ ಡ್ರಗ್ಸ್ ತಡೆಯಲು ಹೊಸ ಭದ್ರತಾ ಕ್ರಮ ಜಾರಿಗೊಳಿಸುತ್ತೇವೆ. ಸಂದರ್ಶಕರ ವಾಹನಗಳು ಮತ್ತು ಸಾಮಗ್ರಿಗಳ ಮೇಲೆ ಕಟ್ಟುನಿಟ್ಟಿನ ಪರಿಶೀಲನೆ ಇರುತ್ತದೆ ಎಂದು ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಈ ಜೈಲಿನಲ್ಲಿ ಮೂರು ಬಾರಿ ಮೊಬೈಲ್ ಫೋನ್, ಚಾರ್ಜರ್ ಮತ್ತು ಡ್ರಗ್ಸ್ ಪತ್ತೆಯಾಗಿವೆ. ಒಬ್ಬ ಕೈದಿ ತನ್ನ ಗಾಯದ ಮೇಲೆ ಹಾಕುವ ಬ್ಯಾಂಡೇಜ್ನೊಳಗೆ ಸಿಮ್ ಕಾರ್ಡ್ ಮತ್ತು ಮೊಬೈಲ್ ಭಾಗಗಳನ್ನು ಮರೆಮಾಚಿ ತಂದಿದ್ದ.


