ಉಳಿದಿರುವ ಮೂರು ವರ್ಷಗಳು ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಅವರೇ ದಸರಾ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಗಜಪಡೆ ಸ್ವಾಗತ ಬಳಿಕ ದಸರಾ ಸಭೆ ನಡೆಸಿದ ಬಳಿಕ ಮಾದ್ಯಮದವರು ಈ ಬಾರಿ ಸಿಎಂ ದಸರಾ ಉದ್ಘಾಟಿಸುವುದು ಅನುಮಾನ ಎಂಬ ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಹೇಳಿಕೆ ಕುರಿತು ಮಹದೇವಪ್ಪ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಮೂರು ವರ್ಷಗಳೂ ಸಿಎಂ ಆಗಿ ಸಿದ್ದರಾಮಯ್ಯ ಅವರೇ ದಸರಾ ಉದ್ಘಾಟನೆಯಲ್ಲಿರಲಿದ್ದಾರೆ ಎನ್ನುವ ಮೂಲಕ ಸಿಎಂ ಸ್ಥಾನ ಹಂಚಿಕೆ ಕುರಿತ ಗೊಂದಲಗಳಿಗೆ ತೆರೆ ಎಳೆದರು. ಇನ್ನೂ ದಸರಾ ಕುರಿತು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದು, 20 ದಿನಗಳ ಕಾಲ ದೀಪಾಲಂಕಾರ ಇರಲಿದೆ. ಉಳಿದಂತೆ ಯುವದಸರಾ, ರೈತದಸರಾ ಎಲ್ಲಾ ಕಾರ್ಯಕ್ರಮ ಗಳನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದರು.
ಬಾನು ಮುಸ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಆಹ್ವಾನ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ದಸರಾ ಉದ್ಘಾಟಕರ ಆಯ್ಕೆ ಸಿಎಂ ಸಿದ್ದರಾಮಯ್ಯ ಅವರ ವಿವೇಚನೆಗೆ ಬೀಡಲಾಗಿದ್ದು, ಅವರ ಆಯ್ಕೆಯೇ ಅಂತಿಮ ಎಂದು ಹೇಳಿದರು.
ಇದೇ ವೇಳೆ ದಸರಾ- 2025ರ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.