ಮುಂಬೈ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬಂಧಿಸುವ ಬೆದರಿಕೆ ಹಾಕಿದ್ದರಿಂದ ಭಯಗೊಂಡ ಬೆಂಗಳೂರಿನ ನಿವೃತ್ತ ಸೇನಾ ಕರ್ನಲ್ 56.05 ಲಕ್ಷ ರೂ. ಕಳೆದುಕೊಂಡಿದ್ದಾರೆ. ನವೆಂಬರ್ 18 ರಂದು ಕೇಂದ್ರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 27 ರಂದು ಕರ್ನಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಪಿಶೆ ಎಂದು ಹೇಳಿಕೊಂಡಡು, ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಸಾರ್ವಜನಿಕರನ್ನು ನಿಂದಿಸಲು ಬಳಸಲಾಗಿದೆ. ವಿಚಾರಣೆಗಾಗಿ ಮುಂಬೈಗೆ ಪ್ರಯಾಣಿಸುವಂತೆ ಸೂಚಿಸಿದ್ದಾನೆ. ಆಗ ಕರ್ನಲ್ ತಾನು ಪ್ರಯಾಣ ಬೆಳೆಸಲು ಸಾಧ್ಯವಿಲ್ಲ ಎಂದಿದ್ದಾರೆ. ವೀಡಿಯೊ ಕರೆ ಮೂಲಕ ಹಿರಿಯ ಅಧಿಕಾರಿ ಕವಿತಾ ಪೊಮನೆ ಎಂದು ಹೇಳಿಕೊಂಡ ಮಹಿಳೆ ಮತ್ತು ಉನ್ನತ ಅಧಿಕಾರಿ ಎಂದು ಹೇಳಿಕೊಂಡ ವಿಶ್ವಾಸ್ ಎಂಬವರು ಮಾತನಾಡಿದ್ದಾರೆ.
ಕರೆ ಮಾಡಿದವರು ವಿಚಾರಣೆಯನ್ನು ಆನ್‌ಲೈನ್ ಮೂಲಕವೇ ನಡೆಸಲಾಗುವುದು ಎಂದು ಹೇಳಿ ಕರ್ನಲ್ ಅವರ ವೈಯಕ್ತಿಕ, ಕುಟುಂಬ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದಾರೆ. ವಿಷಯ ಬಹಿರಂಗಪಡಿಸಿದರೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರತಿ ಮೂರು ಗಂಟೆಗಳಿಗೊಮ್ಮೆ ಅವರ ಲೈವ್ ಲೊಕೇಶನ್ ಕಳಿಸುವಂತೆ ಕೇಳಿದ್ದಾರೆ. ಆರ್‌ಬಿಐ ಪರಿಶೀಲನೆಗಾಗಿ ಅವರ ಬ್ಯಾಂಕ್ ವಿವರಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲು ಸೂಚಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ವಿವರಿಸ ಲಾಗಿದೆ.
ಚಂಚಕರ ಬೆದರಿಕೆ ಮಾತುಗಳನ್ನು ನಂಬಿದ ಕರ್ನಲ್ ನಾಲ್ಕು ಬ್ಯಾಂಕ್ ಖಾತೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ, ವಂಚಕರು ತಿಳಿಸಿದ ಖಾತೆಗೆ 6 ಲಕ್ಷ ರೂ. ಮತ್ತು 5 ಲಕ್ಷ ರೂ. ವರ್ಗಾಯಿಸಿದ್ದಾರೆ. ಅವರ ಮ್ಯೂಚುವಲ್ ಫಂಡ್‌ಗಳು ಮತ್ತು ಇತರ ಹೂಡಿಕೆಗಳನ್ನು ಲಿಕ್ವಿಡೇಟ್ ಮಾಡಲು ಸೂಚಿಸಲಾಗಿದೆ. ಮತ್ತೆ ಬ್ಯಾಂಕ್ ಖಾತೆಗಳಿಂದ 35.05 ಲಕ್ಷ ರೂ. ಮತ್ತು 10 ಲಕ್ಷ ರೂ. ವಂಚಕರು ಹೇಳಿದ್ದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಮರುಪಾವತಿ ಕೇಳಿದಾಗ, ಆರ್‌ಬಿಐ ಪರಿಶೀಲಿಸುತ್ತಿದೆ ಮತ್ತು ಮೂರು ದಿನಗಳಲ್ಲಿ ಹಣವನ್ನು ಹಿಂದಿರುಗಿಸುವುದಾಗಿ ವಂಚಕರು ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) (ವಂಚನೆ) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


