ಧರ್ಮಸ್ಥಳದಲ್ಲಿ 1986 ರಲ್ಲಿ ಅಸಹಜವಾಗಿ ಮೃತರಾಗಿದ್ದ ಬೋಳಿಯಾರುವಿನ ಪದ್ಮಲತಾ ಪ್ರಕರಣದ ಮರು ತನಿಖೆಯನ್ನು ಎಸ್‌ಐಟಿ ನಡೆಸುವಂತೆ ಆಕೆಯ ಕುಟುಂಬ ಮನವಿ ಮಾಡಿದೆ. ಎಸ್‌ಐಟಿ ಕಚೇರಿಗೆ ಪದ್ಮಲತಾ ಕುಟುಂಬ ಇಂದು ಹಾಜರಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹಳೆ ಪ್ರಕರಣ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆ ಇದೆ.
ಈ ಹಿಂದೆ ಸಿಒಡಿ ತನಿಖೆಯಾಗಿ ಪದ್ಮಲತಾ ಕೇಸ್‌ನಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು. 1986 ರ ಡಿಸೆಂಬರ್ 22 ರಂದು ಕಾಣೆಯಾಗಿದ್ದ ಪದ್ಮಲತಾ 56 ದಿನಗಳ ಬಳಿಕ 1987ರಲ್ಲಿ ಅಸಹಜ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ಪ್ರಕರಣ ಸಂಬಂಧ ಎಸ್‌ಐಟಿ ಈಗಾಗಲೇ ತನಿಖಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.