ಸ್ವಿಗ್ಗಿಯಲ್ಲಿ ಸಸ್ಯಾಹಾರ ಆರ್ಡರ್ ಮಾಡಿದ್ದ ಗ್ರಾಹಕಿಗೆ ಸ್ಯಾಂಡ್ವಿಚ್ನಲ್ಲಿ ಸೀಗಡಿ ಸಿಕ್ಕಿದ್ದು, ಆಕೆ ಕೋರ್ಟ್ ಮೊರೆ ಹೋಗಿ ಒಂದು ಲಕ್ಷ ರೂ. ಪರಿಹಾರ ಪಡೆದುಕೊಂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ಮಹಿಳೆಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಸ್ವಿಗ್ಗಿ ಹಾಗೂ ಅವರು ಆಹಾರ ಆಯ್ಕೆ ಮಾಡಿದ್ದ ಪ್ಯಾರಿಸ್ ಪಾಣಿನಿ ಸಂಸ್ಥೆಗೆ ಆದೇಶಿಸಿದೆ.
ಬೆಂಗಳೂರಿನ ನಿಶಾ ಜಿ ಎಂಬವರು ಸ್ವಿಗ್ಗಿ ವಿರುದ್ಧ ಕೇಸ್ ದಾಖಲಿಸಿದವರು. ಪ್ರಾಣಿಗಳ ಮೇಲಿನ ಪ್ರೀತಿಯ ಕಾರಣದಿಂದಾಗಿ ನಿಶಾ ಜೀವನಪೂರ್ತಿ ಸಸ್ಯಾಹಾರವನ್ನೇ ಸೇವಿಸಬೇಕು ಎಂದು ಧೃಡ ನಿರ್ಧಾರ ಮಾಡಿದ್ದರು. 2024ರ ಜುಲೈ 10ರಂದು ಸ್ವಿಗ್ಗಿಯಲ್ಲಿ ಸಸ್ಯಾಹಾರಿ ಸ್ಯಾಂಡ್ವಿಚ್ ಆರ್ಡರ್ ಮಾಡಿದ್ದರು. ಸಸ್ಯಹಾರಿ ಸ್ಯಾಂಡ್ವಿಚ್ನಲ್ಲಿ ಸೀಗಡಿ ತುಂಡುಗಳು ಸಿಕ್ಕಿದ್ದಕ್ಕೆ ಅವರು, ಸ್ವಿಗ್ಗಿ ಹಾಗೂ ಅವರು ಆಹಾರ ಪೂರೈಸಿರುವ ರೆಸ್ಟೋರೆಂಟ್ ಪ್ಯಾರಿಸ್ ಪಾಣಿನಿ ವಿರುದ್ಧ ಕೇಸ್ ದಾಖಲಿಸಿದ್ದರು.
ಸ್ಯಾಂಡ್ವಿಚ್ನಲ್ಲಿ ಸೀಗಡಿ ಸಿಕ್ಕಿದ ನಂತರ ಭಯ ಹಾಗೂ ಶುದ್ಧೀಕರಣದ ಆಚರಣೆ ಮಾಡಬೇಕಾಯಿತು, ಸ್ಯಾಂಡ್ವಿಚ್ ಸೇವಿಸಿದಾಗ ಬೇರೆಯದೇ ರುಚಿ ಅನುಭವಕ್ಕೆ ಬಂತು. ಮರುದಿನ ಗ್ರಾಹಕಿ ನಿಶಾ ಪ್ಯಾರಿಸ್ ಪಾಣಿನಿ ಔಟ್ಲೆಟ್ಗೆ ಭೇಟಿ ನೀಡಿದಾಗ ವ್ಯವಸ್ಥಾಪಕರು ಅವರಿಗಾದ ಗೊಂದಲವನ್ನು ಒಪ್ಪಿಕೊಂಡರು. ಬದಲಾಗಿ ಬೇರೆ ನೀಡುವುದಾಗಿ ಹೇಳಿದರು. ನಿಶಾ ರೆಸ್ಟೋರೆಂಟ್ ಮನವಿ ತಿರಸ್ಕರಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಘಟನೆಯಿಂದ ಅವಮಾನ ಮತ್ತು ಆಧ್ಯಾತ್ಮಿಕ ಭಾವನೆಗೆ ಘಾಸಿಯಾಗಿದೆ ಎಂದು ಹೇಳಿದ್ದರು.
2024 ರ ಜುಲೈ 20ರಂದು ನಿಶಾ ಸ್ವಿಗ್ಗಿ ಮತ್ತು ಪ್ಯಾರಿಸ್ ಪಾಣಿನಿ ಸಂಸ್ಥಗೆ ನೋಟಿಸ್ ಕಳುಹಿಸಿದರು, ಎರಡೂ ಸಂಸ್ಥೆಗಳು ಪ್ರತಿಕ್ರಿಯಿಸಿರಲಿಲ್ಲ. 2024ರ ಆಗಸ್ಟ್ 22ರಂದು ಸೇವೆಯ ಕೊರತೆ ಮತ್ತು ನಂಬಿಕೆ ದ್ರೋಹ ಆರೋಪಿಸಿ ಕೋರ್ಟ್ನಲ್ಲಿ ದೂರು ದಾಖಲಿಸಿದ್ದು, 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸ್ವಿಗ್ಗಿ ಮತ್ತು ಪ್ಯಾರಿಸ್ ಪಾಣಿನಿ ಜಂಟಿಯಾಗಿ ಗ್ರಾಹಕಿಗೆ ಪರಿಹಾರವಾಗಿ 50,000 ರೂ., ಮಾನಸಿಕ ಯಾತನೆಗೆ 50,000 ರೂ., ಮೊಕದ್ದಮೆ ವೆಚ್ಚಕ್ಕೆ 5,000 ರೂ. ಮತ್ತು ಸ್ಯಾಂಡ್ವಿಚ್ ಖರೀದಿಗೆ ನೀಡಿದ 146 ರೂಪಾಯಿಗೆ 12 ಶೇಕಡಾ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶಿಸಿದೆ.


