ಬೆಂಗಳೂರಿನಲ್ಲಿ ವೈದ್ಯರೇ ಅಚ್ಚರಿಪಡುವಂತೆ ಎಂಟು ವರ್ಷದ ಬಾಲಕಿಯ ಹೊಟ್ಟೆಯೊಳಗೆ ಮೂರು ಕೆಜಿ ಕೂದಲು ಪತ್ತೆಯಾಗಿದೆ. ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯೊಳಗಿದ್ದ ಮೂರು ಕೆಜಿ ತೂಕದ ಕೂದಲು ಗಂಟನ್ನು ಹೊರ ತೆಗೆದಿದ್ದಾರೆ.
‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದ ಬಾಲಕಿ 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದು, ಇದು ಬಹು ಅಪರೂಪದ ಕಾಯಿಲೆ ಎಂದು ತಿಳಿಸಿದ್ದಾರೆ.
ಆದರೆ ಬಾಲಕಿ ಕೂದಲು ನುಂಗುತ್ತಿರುವ ಬಗ್ಗೆ ಇಷ್ಟೂ ವರ್ಷ ಪೋಷಕರಿಗೆ ಸಣ್ಣ ಅನುಮಾನವೂ ಬಂದಿಲ್ಲ. ಇತ್ತೀಚೆಗೆ ತೂಕ ಕಡಿಮೆಯಾಗುತ್ತಿತ್ತು. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಹೊಟ್ಟೆ ಭಾಗದಲ್ಲಿ ಗಡ್ಡೆ ರೀತಿಯ ಗುರುತು ಪತ್ತೆಯಾಗಿದ್ದರಿಂದ ಎಚ್ಚೆತ್ತ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರಿಶೀಲಿಸಿ ಹೊಟ್ಟೆ ಭಾಗದಲ್ಲಿ ಗಡ್ಡೆ ಇದ್ದಿದ್ದರಿಂದ ಸಿಟಿ-ಸ್ಕ್ಯಾನ್ ಮಾಡಿದ್ದರು. ಸ್ಕ್ಯಾನ್ ವರದಿಯಲ್ಲಿ ಕೂದಲು ಇರುವುದು ಪತ್ತೆಯಾಗಿ, ಶಸ್ತ್ರ ಚಿಕಿತ್ಸೆ ನಡೆಸಿ ಕೂದಲು ಹೊರ ತೆಗೆದಿದ್ದಾರೆ.
ಮಕ್ಕಳ ತಜ್ಞರಾದ ಡಾ.ಎಚ್.ಎಸ್.ಸುರೇಂದ್ರ ನೇತೃತ್ವದಲ್ಲಿ ಡಾ.ಪ್ರದೀಪ್, ಡಾ.ಹೇಮಾ, ಡಾ. ದೀಪ್ತಿ, ಡಾ.ಕೇಶವ ಮೂರ್ತಿ, ಡಾ.ಮಂಜುನಾಥ್ ಅವರನ್ನು ಒಳಗೊಂಡ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ಮೂರು ಕೆಜಿಯಷ್ಟು ಕೂದಲು ಸುರುಳಿ ಆಕಾರದಲ್ಲಿ ಸುತ್ತಿಕೊಂಡು 35 ಸೆ.ಮೀ. ಉದ್ದ ಜಡೆ ಸೃಷ್ಟಿಯಾಗಿತ್ತು. ಹೊಟ್ಟೆ ಭಾಗದಲ್ಲಿ ಸಣ್ಣ ಕರಳಿನವರೆಗೂ ಕೂದಲಿನ ಗಡ್ಡೆ ವ್ಯಾಪಿಸಿತ್ತು. ಮೊದಲಿಗೆ ಎರಡು ಬಯೋಪ್ಸಿ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ಪ್ರಯತ್ನಿಸಿದರೂ ಕೂದಲು ತುಂಡಾಗುತ್ತಿತ್ತು. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಕೂದಲಿನ ಗಡ್ಡೆ ತೆಗೆಯಲಾಗಿದೆ ಎಂದು ಡಾ.ಎಚ್.ಎಸ್. ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ.


