ಧರ್ಮ, ದೇವರ ಹೆಸರಲ್ಲಿ ಸರಕಾರಿ ಜಾಗ ಅತಿಕ್ರಮಿಸಲು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಅವಕಾಶ ನೀಡುವುದಕ್ಕೆ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕೋಲಾರದ ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್ ಹಾಗೂ ಗ್ರಾಮದ ರಸ್ತೆಯ ಸರಕಾರಿ ಜಾಗದಲ್ಲಿ ನಿರ್ಮಿಸಿರುವ ಮಳಿಗೆಗಳ ತೆರವಿಗೆ ತಹಸೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಜಾಮೀಯಾ ಮಸ್ಜಿದ್ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಹೀಗೆ ತಾಕೀತು ಮಾಡಿದೆ.
ಅರ್ಜಿದಾರರು ಮಳಿಗೆಗಳನ್ನು ಕಟ್ಟಿರುವ ಜಾಗ ಸರಕಾರಿ ಜಮೀನು, ಸರಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ, ಮಳಿಗೆಗಳನ್ನು ಕಟ್ಟಿ ಅವುಗಳನ್ನು ಬಾಡಿಗೆಗೆ ಕೊಟ್ಟು ಬಾಡಿಗೆ ವಸೂಲಿ ಮಾಡುತ್ತಿರುವುದು ಯಾವ ಆಧಾರದಲ್ಲಿ ಮತ್ತು ಯಾವ ಉದ್ದೇಶಕ್ಕೆ, ಇದು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ, ಇದಕ್ಕೆ ಅವಕಾಶ ನೀಡಲಾಗದು ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿದೆ.
ಅರ್ಜಿದಾರರು ಚಾರಿಟಬಲ್ ಟ್ರಸ್ಟ್ ಎಂದು ಹೇಳಿಕೊಂಡಿದ್ದು, ಮಳಿಗೆ ಕಟ್ಟಿ ಬಾಡಿಗೆ ವಸೂಲಿ ಮಾಡುವುದು ಏಕೆ, ಎರಡೂ ಧರ್ಮದವರು ಅರ್ಜಿ ಸಲ್ಲಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೈಕೋರ್ಟ್ ಹೇಳಿದೆ.


