ಬೆಂಗಳೂರಿನ ಜಯನಗರದಲ್ಲಿ ಎಟಿಎಂಗೆ ಸಾಗಿಸುತ್ತಿದ್ದ ಹಣವಿದ್ದ ವಾಹನವನ್ನು ದರೋಡೆ ಮಾಡಿ ಏಳು ಕೋಟಿ ರೂ. ಒಯ್ದು ಪರಾರಿಯಾಗಿರುವ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಪೊಲೀಸ್ ಕಾನ್ಸ್ಟೇಬಲ್ವೊಬ್ಬರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ತಿರುಪತಿಯಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಕೃತ್ಯದ ರೂವಾರಿ ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂಬುದು ತಿಳಿದು ಬಂದಿದೆ. ಅಣ್ಣಪ್ಪ ನಾಯ್ಕ್ ದರೋಡೆಗೆ ಹುಡುಗರನ್ನು ಸಿದ್ಧಪಡಿಸಿದ್ದ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಅಣ್ಣಪ್ಪ ನಾಯ್ಕ್, ದರೋಡೆ ತರಬೇತಿ ನೀಡಿದ್ದ. ಹೇಗೆ ದರೋಡೆ ಮಾಡಬೇಕು, ಹೇಗೆ ತಪ್ಪಿಸಿಕೊಳ್ಳಬೇಕೆಂದು ಹೇಳಿ ಕೊಟ್ಟಿದ್ದ. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆಂಬುದನ್ನೂ ತಿಳಿಸಿದ್ದ. ಅದರಂತೆ ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ತಂಡ 7.11 ಕೋಟಿ ರೂ. ದರೋಡೆ ಮಾಡಿದೆ. ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಯ ಮಾಜಿ ಉದ್ಯೋಗಿಗಳು ದರೋಡೆಗೆ ಕೈಜೋಡಿಸಿ, ಕದ್ದ ಹಣವನ್ನು ಬೆಂಗಳೂರಲ್ಲಿಯೇ ಬಚ್ಚಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ದರೋಡೆಕೋರರ ಪತ್ತೆಗೆ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ದರೋಡೆಗೆ ಬಳಸಿದ ಕಾರು ಗುರುವಾರ ತಿರುಪತಿಯಲ್ಲಿ ಸಿಕ್ಕಿದೆ. ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಸಿದ್ದಾಪುರ ಪೊಲೀಸರು ಡೇವಿಡ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದರೋಡೆ ಕೃತ್ಯದಲ್ಲಿ ಶಾಮೀಲಾಗಿದ್ದ ವಿಜಯ್ ಬಳಿ ಇದ್ದದ್ದು ಡೇವಿಡ್ನ ಬೈಕ್ ಎನ್ನಲಾಗಿದೆ. ಡೇವಿಡ್ನಿಂದ ಬೈಕ್ ಪಡೆದಿದ್ದ ವಿಜಯ್ ಎಂಬಾತ ಮತ್ತೊಬ್ಬ ವಿಜಯ್ ಎಂಬವನಿಗೆ ನೀಡಿದ್ದ.
ಸಿಎಂಎಸ್ ವಾಹನದಿಂದ ಕಾರಿಗೆ ಹಣ ಶಿಫ್ಟ್ ಮಾಡಿದ್ದ ದರೋಡೆಕೋರರು, ನಕಲಿ ನಂಬರ್ ಪ್ಲೇಟ್ ಬಳಸಿದ್ದಾರೆ. ಆ ನಂಬರ್ ಜಾಡು ಹಿಡಿದ ಪೊಲೀಸ್ಗೆ ಕಾರು ಪತ್ತೆ ಆಗಿದೆ.


