ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಎಸ್ ಐಟಿ ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ 3923 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದ ಎಸ್ ಐಟಿ ಪೊಲೀಸರ ತಂಡ ಸುಮಾರು 5 ತಿಂಗಳ ಕಾಲ ನಡೆಸಿದ ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಸೂಕ್ತ ತನಿಖೆ ನಡೆಸಿ ಪೂರ್ಣ ಪ್ರಮಾಣದ ಚಾರ್ಜ್ ಶೀಟ್ ಸಲ್ಲಿಕೆಗೆ ಎಸ್ ಐಟಿ ನ್ಯಾಯಾಲಯದ ಮುಂದೆ ಮನವಿ ಮಾಡಿದೆ.
ಒಟ್ಟು 3,923 ಪುಟಗಳ ತನಿಖಾ ವರದಿಯಲ್ಲಿ ಧರ್ಮಸ್ಥಳ ನೇತ್ರಾವತಿ ದಡದ ಮೇಲೆ ಶವಗಳ ಉತ್ಖನನ ಹಾಗೂ ಪತ್ತೆಯಾದ ಕಳೇಬರದ ಎಫ್ ಎಸ್ ಎಲ್ ವರದಿ ಹಾಗೂ ಸಾಕ್ಷ್ಯಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.
ಆರೋಪಿ ಬಂಧನದ ನಂತರ 90 ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಸಬೇಕು ಎಂಬ ನಿಯಮವಿದೆ. ಪ್ರಕರಣದ ತನಿಖೆಗೆ ಕಾರಣವಾದ ಚಿನ್ನಯ್ಯ ಬಂಧನದ ಬಳಿಕ 90 ದಿನ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಚಾರ್ಜ್ ಶೀಟ್ ನಲ್ಲಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ವಿಠಲಗೌಡ ಸೇರಿದಂತೆ 6 ಮಂದಿಯ ವಿರುದ್ಧ ಸುಳ್ಳು ಸಾಕ್ಷ್ಯ ಆರೋಪ ಹೊರಿಸಲಾಗಿದೆ.


