ಬೆಂಗಳೂರಿನಲ್ಲಿ ಬುಧವಾರ ಎಟಿಎಂಗೆ ಹಣ ಹಾಕುವ ಕಾರು ತಡೆದು 7 ಕೋಟಿ ರೂ. ದರೋಡೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ತಿರುಪತಿಯಲ್ಲಿ ಬಂಧಿಸಿದ್ದಾರೆ. ಹೇಮಂತ್, ಸುನೀಲ್ ಬಂಧಿತ ಆರೋಪಿಗಳಾಗಿದ್ದು, ದರೋಡೆಗೆ ಬಳಸಿದ್ದಾರೆ ಎನ್ನಲಾದ ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಯನಗರದ ಅಶೋಕ ಪಿಲ್ಲರ್ ಬಳಿ ಎಟಿಎಂ ವಾಹನ ಅಡ್ಡಗಟ್ಟಿ ನಾವು ಆರ್‌ಬಿಐನವರು ಎಂದು ಹೇಳಿಕೊಂಡು ನೀವು ನಿಯಮ ಉಲ್ಲಂಘಿಸಿದ್ದೀರಿ. ಠಾಣೆಗೆ ಬನ್ನಿ ಎಂದು ಹೇಳಿ ಆರೋಪಿಗಳು ಎಟಿಎಂ ವಾಹನ ಹೈಜಾಕ್ ಮಾಡಿ 7 ಕೋಟಿ 11 ದರೋಡೆ ಮಾಡಿದ್ದರು.
ದರೋಡೆ ಪ್ರಕರಣ ಕುರಿತು ಸಿಎಂಎಸ್ ಏಜೆನ್ಸಿ ಮ್ಯಾನೇಜರ್ ದೂರು ಆಧರಿಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದರೋಡೆಯಾದ 7.11 ಕೋಟಿ ಹಣ ಜೆಪಿನಗರ, ಸಾರಕ್ಕಿ ಬ್ರ್ಯಾಂಚ್ ಹಾಗೂ ಐಟಿಐ ಲೇಔಟ್‌ನ ಬ್ಯಾಂಕುಗಳಿಗೆ ಸೇರಿದ್ದಾಗಿತ್ತು.
ದರೋಡೆಕೋರರು ಸಾಕ್ಷ್ಯಗಳು ಸಿಗಬಾರದು ಎಂದು ಸಿಸಿಟಿವಿ ಡಿವಿಆರ್ ಕೂಡ ಹೊತ್ತೊಯ್ದಿದ್ದಾರೆ. ದರೋಡೆಕೋರರ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ದರೋಡೆಕೋರರು ಕಾರಿಗೆ ಬಳಸಿದ ನಕಲಿ ನಂಬರ್ ಪ್ಲೇಟ್ ಪಿಬಿ ಗಂಗಾರ್ ಎಂಬರಿಗೆ ಸೇರಿದ್ದು ಎಂಬುದು ಪತ್ತೆಯಾಗಿತ್ತು.
ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ಗ್ಯಾಂಗ್ ಜಯನಗರದ ಅಶೋಕ ಪಿಲ್ಲರ್ ಬಳಿ ಎಟಿಎಂ ವಾಹನ ಅಡ್ಡಗಟ್ಟಿ ನಾವು ಆರ್‌ಬಿಐನವರು ಎಂದು ಹೇಳಿಕೊಂಡಿದ್ದಾರೆ. ನೀವು ನಿಯಮ ಉಲ್ಲಂಘಿಸಿದ್ದೀರಿ. ಠಾಣೆಗೆ ಬನ್ನಿ ಅಂತ ಹೇಳಿ ಹಣ ಇದ್ದ ಸಿಎಂಎಸ್ ವಾಹನ ಹೈಜಾಕ್ ಮಾಡಿದ್ದಾರೆ. ನಂತರ ಡೈರಿ ಸರ್ಕಲ್ ಫ್ಲೈಓವರ್‌ನಲ್ಲಿ ವಾಹನ ನಿಲ್ಲಿಸಿ ಹಣವನ್ನು ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದರು.
ಎಟಿಎಂ ವಾಹನದಲ್ಲಿ ಇಬ್ಬರು ಗನ್‌ಮ್ಯಾನ್, ಡ್ರೈವರ್, ಓರ್ವ ಸಿಎಂಎಸ್ ಸಿಬ್ಬಂದಿ ಇದ್ದರು. ಅವರನ್ನು ವಶಕ್ಕೆ ಪಡೆದು ಸಿದ್ದಾಪುರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದರು. ದರೋಡೆಕೋರರು ಮೊಬೈಲ್ ಕಸಿದುಕೊಂಡಿದ್ದರಿಂದ ಮಾಹಿತಿ ಕೊಡುವುದು ತಡವಾಗಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟಿ ಮ್ಯಾನೇಜರ್ ಹೇಳಿದ್ದರು.


