Thursday, November 20, 2025
Menu

ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಮಿತಿ ಹೆಚ್ಚಳಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಒಟ್ಟು ಮೀಸಲು ಪ್ರಮಾಣವನ್ನು ಶೇ.50ರಿಂದ 56ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ(ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ 2022ಗೆ ರಾಜ್ಯ ಸರ್ಕಾರ ತಡೆ ನೀಡಿದೆ.

ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಕಾಯ್ದೆ 2022ರ ಕಾಯ್ದೆ ಜಾರಿ ಕುರಿತು ಮುಂದಿನ ವಿಚಾರಣೆಯವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಬುಧವಾರ ನಿರ್ದೇಶನ ನೀಡಿದೆ. ಇದರಿಂದ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮತ್ತೆ ಸ್ಥಗಿತಗೊಂಡಂತಾಗಲಿದೆ.

ಪರಿಶಿಷ್ಟ ಜಾತಿಗೆ ಶೇ. 15ರಿಂದ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3ರಿಂದ ಶೇ.7ರ ವರೆಗೂ ಮೀಸಲಾತಿ ಹೆಚ್ಚಳ ಮಾಡಿ ಒಟ್ಟು ಮೀಸಲಾತಿಯನ್ನು 56ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ 2023ರ ಜನವರಿ 12ರಂದು ಹೊರಡಿಸಿದ್ದ ಕಾಯ್ದೆಯ ಗೆಜೆಟ್​ ಅಧಿಸೂಚನೆ ರದ್ದು ಕೋರಿ ಡಾ. ಅಂಬೇಡ್ಕರ್​ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್​ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಪೂಣಚ್ಚ ಅವರಿದ್ದ ನ್ಯಾಯಪೀಠ, ಕಾಯ್ದೆ ಅಡಿಯಲ್ಲಿ ಮುಂದಿನ ವಿಚಾರಣೆವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಈ ವೇಳೆ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್​ ಜನರಲ್​ ರೋಬಿನ್​ ಜೇಕಬ್​, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನ ಮತ್ತೊಂದು ಪೀಠ, ನೇಮಕಾತಿ ಪ್ರಕ್ರಿಯೆಯಗಳನ್ನು ನಡೆಸಬಹುದು. ಆದರೆ, ನೇಮಕಾತಿ ಆದೇಶಗಳನ್ನು ನೀಡದಂತೆ ಆದೇಶಿಸಿದೆ. ಹೀಗಾಗಿ ಅದೇ ಆದೇಶವನ್ನು ಈ ಅರ್ಜಿಯಲ್ಲಿಯೂ ಮುಂದುವರೆಸಬೇಕು. ಅಲ್ಲದೆ, ಕಳೆದ ಒಂದು ವರ್ಷದಿಂದ ನೇಮಕಾತಿಗಳು ನಡೆದಿಲ್ಲ. ಇದೀಗ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಕಾಯ್ದೆಗೆ ತಡೆ ನೀಡಿದಲ್ಲಿ ಮತ್ತಷ್ಟು ವಿಳಂಬವಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.

ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಕಾಯ್ದೆ 2023ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಈವರೆಗೂ ನೇಮಕಾತಿಗಳಲ್ಲಿ ವಿಳಂಬವಾಗಿದೆ. ಮುಂದಿನ ವಿಚಾರಣೆವರೆಗೂ ಕಾಯುವುದಕ್ಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿತು. ಅಲ್ಲದೆ, ಇಲ್ಲಿಯವರೆಗೂ ಸರ್ಕಾರ ಏನು ಮಾಡುತ್ತಿತ್ತು. ಇನ್ನೂ ಆರು ತಿಂಗಳವರೆಗೆ ನೇಮಕಾತಿ ಮಾಡದಿದ್ದರೆ ಏನೂ ಆಗುವುದಿಲ್ಲ. ಮೊದಲು ಅರ್ಜಿಯಲ್ಲಿ ಎತ್ತಿರುವ ಕಾನೂನಾತ್ಮಕ ಅಂಶಗಳು ಪರಿಹಾರವಾಗಲಿ ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರೇ ಸ್ವತಃ ವಾದ ಮಂಡಿಸಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡುವ ಸಂದರ್ಭದಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ಉಲ್ಲಂಘಿಸಿದೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಮಾಡುವ ಸಂದರ್ಭದಲ್ಲಿ ಸಂವಿಧಾನಧ ಪರಿಚ್ಛೇದ 338ಎ(9)ರ ಪ್ರಕಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳು ಮತ್ತು 338ಬಿ(9) ರ ಪ್ರಕಾರ ರಾಷ್ಟ್ರೀಯ ಪಂಗಡಗಳ ಆಯೋಗದ ಒಪ್ಪಿಗೆ ಪಡೆಯಬೇಕು ಎಂಬುದು ಕಡ್ಡಾಯವಾಗಿದೆ.

ಸರ್ಕಾರ ಅನುಮತಿ ಪಡೆಯದೇ ಮೀಸಲಾತಿ ಹೆಚ್ಚಳ ಮಾಡಿರುವುದು ಸಂವಿಧಾನ ಬಾಹಿರವಾಗಿದೆ. ಆದ್ದರಿಂದ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಹೆಎಚ್​.ಎನ್. ನಾಗಮೋಹನ್​ ದಾಸ್​ ಅವರ ಏಕಸದಸ್ಯ ಆಯೋಗವನ್ನು ರಚನೆ ಮಾಡಲಾಗಿತ್ತು. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ದತ್ತಾಂಶಗಳನ್ನು ಸಂಗ್ರಹ ಮಾಡಿ ಆಯೋಗ ಶಿಫಾರಸ್ಸು ನೀಡಿದೆ. ಅದರ ಆಧಾರದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದು, ಈ ಸಂಬಂಧ ಕಾಯ್ದೆ ರಚನೆ ಮಾಡಲಾಗಿದೆ ಎಂದು ಪೀಠಕ್ಕೆ ಮನವಿ ಮಾಡಿದರು. ಮಹಾರಾಷ್ಟ್ರದಲ್ಲಿ ಮರಾಠ ಭಾಷಿಕರಿಗೆ ಮೀಸಲಾತಿ ನೀಡಲಾಗಿದ್ದು, ಅದರಂತೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ ಎಂದು ಪೀಠಕ್ಕೆ ಸರ್ಕಾರದ ಪರ ವಕೀಲರು ತಿಳಿಸಿದರು.

ಮರಾಠ ಮೀಸಲಾತಿ ಹೆಚ್ಚಳ ಮಾಡಿರುವ ಸರ್ಕಾರದ ಕ್ರಮಕ್ಕೆ ಬಾಂಬೆ ಹೈಕೋರ್ಟ್​ ತಡೆ ನೀಡಿದಿಯಲ್ಲವೇ ಎಂದು ಪ್ರಶ್ನಿಸಿತು. ವಾದ ಮುಂದುವರೆಸಿದ ವಕೀಲರು, ಮುಂದಿನ ವಿಚಾರಣೆ ವೇಳೆ ಸರ್ಕಾರದ ಎಲ್ಲ ವಾದಾಂಶಗಳನ್ನು ಪೀಠಕ್ಕೆ ಸಲ್ಲಿಸಲಾಗುವುದು. ಆದ್ದರಿಂದ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ಪೀಠ, ಇದೇ ಅಂಶಗಳನ್ನು ಎತ್ತಿರುವ ಎರಡು ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿ ವಿಚಾರಣೆಯನ್ನು ಮುಂದೂಡಿತು.

Related Posts

Leave a Reply

Your email address will not be published. Required fields are marked *