ಬಂಟ್ವಾಳದ ಬಿಸಿ ರೋಡ್‌ನಲ್ಲಿರುವ ಟೆಕ್ಸ್ ಟೈಲ್ ಅಂಗಡಿಗೆ ಬುರ್ಖಾ ಧರಿಸಿಕೊಂಡು ಬಂದ ಮಹಿಳೆ ಗಂಡನಿಗೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಕೃಷ್ಣ ಕುಮಾರ್ ಸೋಮಯಾಜಿ ಅವರು ತಮ್ಮ ಟೆಕ್ಸ್ ಟೈಲ್ ಅಂಗಡಿಯ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದಾಗ ಪತ್ನಿ ಜ್ಯೋತಿ ಸೋಮಯಾಜಿ ಬಂದು ಕತ್ತಿಯಿಂದ ಕಡಿದು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಕೃಷ್ಣ ಸೋಮಯಾಜಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಜ್ಯೋತಿ ಸೋಮಯಾಜಿ ಅವರನ್ನು ಬಂಟ್ವಾಳ ಪೋಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಗರ ಪೋಲೀಸರು ಸ್ಥಳದಲ್ಲಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಯತ್ನಕ್ಕೆ ಕಾರಣಗಳೇನು, ಹಣಕಾಸಿನ ವ್ಯವಹಾರವೇ, ಆಸ್ತಿ ಸಂಬಂಧ ದ್ವೇಷವೇ ಎಂಬುದು ಸೇರಿದಂತೆ ಪೊಲೀಸರು ಎಲ್ಲ ಕೋನಗಳಲ್ಲೂ ವಿಚಾರಣೆ ಕೈಗೊಂಡಿದ್ದಾರೆ. ಇತ್ತೀಚೆಗೆ ಸೋಮಯಾಜಿ ಕುಟುಂಬದಲ್ಲಿ ಕೌಟುಂಬಿಕ ಕಲಹ ತೀವ್ರಗೊಂಡು ಬಂಟ್ವಾಳ ನಗರ ಪೋಲೀಸ್ ಠಾಣೆ ವರೆಗೂ ತಲುಪಿತ್ತು ಎಂದು ಹೇಳಲಾಗಿದೆ.


