Thursday, November 20, 2025
Menu

ನಾನು ಕೆಲಸ ಮಾಡುವ ಗುಂಪಿಗೆ ಸೇರಿದವ, ಬೇರೆಯವರ ಕೆಲಸದ ಲಾಭ ಪಡೆಯುವವನಲ್ಲ: ಡಿಕೆ ಶಿವಕುಮಾರ್‌ 

“ಇಂದಿರಾ ಗಾಂಧಿ ಅವರು ದೇಶದ ಮಹಿಳಾ ಶಕ್ತಿಯ ಚಿಹ್ನೆ. ದೇಶ ಪ್ರೇಮ, ದೃಢ ನಿಶ್ಚಯ, ಧೈರ್ಯದ ಪ್ರತೀಕವಾಗಿದ್ದಾರೆ.  ಜಗತ್ತಿನಲ್ಲಿ ಎರಡು ರೀತಿಯ ಜನರಿರುತ್ತಾರೆ. ಒಬ್ಬ ಕೆಲಸ ಮಾಡುವವನು, ಮತ್ತೊಬ್ಬ ಅದರ ಲಾಭ ಪಡೆದುಕೊಳ್ಳುವವನು. ನೀವು ಮೊದಲ ಗುಂಪಿಗೆ ಸೇರಿ ಎಂದು ಇಂದಿರಾ ಗಾಂಧಿ ನನಗೆ ಹೇಳಿದ್ದಾಗಿ ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.  ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಮಾತನಾಡಿದರು.

“ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಇಂದು ಬೆಳಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಗಾಂಧಿ ಅವರ ಸಮಾಧಿಗೆ ಹೋಗಿ ಗೌರವ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅವರು ನನನ್ನು ಕರೆದು ಅವರ ಸಮಾಧಿ ಸುತ್ತಮುತ್ತಲ ಜಾಗ ಅಭಿವೃದ್ಧಿ ಪಡಿಸಲು ಸೂಚಿಸಿದ್ದರು. ಜೊತೆಗೆ ಪೆರಂಬೂರಿನಲ್ಲಿರುವ ರಾಜೀವ್ ಗಾಂಧಿ ಅವರ ಸಮಾಧಿಗೆ ಗ್ರಾನೈಟ್ ಹಾಕುವ ಭಾಗ್ಯ ನನಗೆ ಸಿಕ್ಕಿದೆ. ನಾನು ಹಾಗೂ ನನ್ನ ಸಹೋದರ ನಮ್ಮದೇ ಕ್ವಾರೆಯಿಂದ ಗ್ರಾನೈಟ್ ಕಲ್ಲನ್ನು ತೆಗೆದುಕೊಂಡು ಹೋಗಿ ಅಲ್ಲಿ ಹಾಕಿ ನಮ್ಮ ಕೈಲಾದ ಸೇವೆ ಮಾಡುವ ಭಾಗ್ಯ ಸಿಕ್ಕಿತು” ಎಂದು ಸ್ಮರಿಸಿದರು.

“ಇಂದಿರಾ ಗಾಂಧಿ ಅವರ ಹತ್ಯೆಯಾದ ದಿನ ನಾವು ಯೂಥ್ ಕಾಂಗ್ರೆಸ್ ಸಮ್ಮೇಳನಕ್ಕಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದೆವು. ಇಂದಿರಾ ಗಾಂಧಿ ಅವರ ಹತ್ಯೆ ಹಿನ್ನೆಲೆಯಲ್ಲಿ ರೈಲು ಅರ್ಧದಾರಿಯಲ್ಲೇ ನಿಂತಿತು. ಆಗ ನಾನು ಪ್ರವಾಸಿ ಚಿತ್ರಮಂದಿರ ಆರಂಭಿಸಲು ಅರ್ಜಿ ಹಾಕಿದ್ದೆ. ಅದಕ್ಕೆ ನಾನು ಇಂದಿರಾ ಜೀ ಚಿತ್ರಮಂದಿರ ಎಂದು ಹೆಸರಿಟ್ಟೆ. ಇಂದಿರಾ ಗಾಂಧಿ ಅವರ ನಿಧನದ ನಂತರ ರಾಜೀವ್ ಗಾಂಧಿ ಅವರು ನಾಯಕತ್ವ ವಹಿಸಿದರು. ನನಗೆ ಹಾಗೂ ವಿನಯ್ ಕುಮಾರ್ ಸೊರಕೆ ಅವರು ವಿದ್ಯಾರ್ಥಿ ನಾಯಕರಾಗಿದ್ದೆವು” ಎಂದು ಮೆಲುಕು ಹಾಕಿದರು.

“ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನೆಗೆ 20 ಅಂಶಗಳ ಮೂಲಕ ಹೋರಾಟ ಆರಂಭಿಸಿದರು. ಉಳುವವನಿಗೆ ಭೂಮಿ ಕೊಟ್ಟಿದ್ದರೆ ಅದು ಇಂದಿರಾ ಗಾಂಧಿ ಅವರು. ಈ ಯೋಜನೆಯಲ್ಲಿ ಲಕ್ಷಾಂತರ ಜನ ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡುವಾಗ ಮೊಳಕಾಲ್ಮೂರು ಸಮೀಪ ವೃದ್ಧ ಮಹಿಳೆಯೊಬ್ಬರು ಬಂದು ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ತಂದು ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು ಎಂದು ಹೇಳಿದರು. ಇಂದಿರಾ ಗಾಂಧಿ ಅವರ ಕೆಲಸಗಳ ಪೈಕಿ ಬ್ಯಾಂಕುಗಳ ರಾಷ್ಟ್ರೀಕರಣ ಬಹು ದೊಡ್ಡ ನಿರ್ಧಾರ. ಅದು ಇಲ್ಲವಾಗಿದ್ದರೆ ನಮಗೆ ಸಾಲ ಕೊಡುವವರೇ ಇರುತ್ತಿರಲಿಲ್ಲ. ನಾನು ಆರಂಭದಲ್ಲಿ ಮೊಟಾರ್ ಸೈಕಲ್ ಖರೀದಿ ಮಾಡಲು ಸೇಠುಗಳ ಬಳಿ ಹೋಗಿ ಬೇರೆಯವರ ಗ್ಯಾರಂಟಿ ನೀಡಬೇಕಿತ್ತು. ಈ ನಿರ್ಧಾರದಿಂದ ಬ್ಯಾಂಕುಗಳು ಜನರಿಗೆ ಸಾಲ ಸೌಲಭ್ಯ ನೀಡಿದರು. ಇಲ್ಲಿ ಜನಾರ್ದನ ಪೂಜಾರಿ ಅವರು ಎಲ್ಲಾ ಜನರಿಗೆ ಸಾಲ ಸಿಗುವಂತೆ ಮಾಡಿ, ಸಾಲದ ಪೂಜಾರಿ ಎಂದೇ ಹೆಸರು ಮಾಡಿದರು. ಅದರ ಪರಿಣಾಮವಾಗಿ ಇಂದು ಬ್ಯಾಂಕುಗಳು ಜನರ ಮನೆ ಬಾಗಿಲಿಗೆ ತಲುಪುವಂತಾಗಿದೆ. ಪ್ರಪಂಚದ ಅನೇಕ ದೊಡ್ಡ ಬ್ಯಾಂಕುಗಳು ಮುಳುಗಿದರೂ ನಮ್ಮ ದೇಶದ ಬ್ಯಾಂಕುಗಳು ಮುಳುಗಿಲ್ಲ. ಮನಮೋಹನ್ ಸಿಂಗ್ ಅವರ ದಿಟ್ಟ ನಿರ್ಧಾರಗಳ ಪರಿಣಾಮ ನಮ್ಮ ಬ್ಯಾಂಕುಗಳು ಸದೃಢವಾಗಿವೆ” ಎಂದರು.

“ಇನ್ನು ಮಾಲೀನ್ಯ ನಿಯಂತ್ರಣ ಮಂಡಳಿಗಳನ್ನು ಆರಂಭಿಸಿದ್ದು, ಇಂದಿರಾ ಗಾಂಧಿ ಅವರು. ಅಂಗನವಾಡಿ ಆರಂಭಿಸಿದರು. ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರ ನೇಮಕ ಮಾಡಿದ್ದು ಇಂದಿರಾ ಗಾಂಧಿ ಅವರು. ವೃದ್ಧಾಪ್ಯ, ವಿಧವಾ ಪಿಂಚಣಿ ಕೊಟ್ಟಿದ್ದು ಇಂದಿರಾ ಗಾಂಧಿ ಅವರು. ಅವರ ಯೋಜನೆಗಳನ್ನು ಯಾವುದೇ ಸರ್ಕಾರ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು 371ಜೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಕೃಷ್ಣ ಆವರ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಲಾಲ ಕೃಷ್ಣಾ ಆಡ್ವಾಣಿ ಅವರು ಇದು ಸಾಧ್ಯವಿಲ್ಲ ಎಂದು ಬರೆದರು.ಆದರೆ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲಕ ಜಾರಿಗೆ ತಂದಿತು” ಎಂದು ಹೇಳಿದರು.

“ಕಾಂಗ್ರೆಸ್ ಸರ್ಕಾರ ಆಧಾರ್ ಕಾರ್ಡ್ ಜಾರಿಗೆ ತಂದಾಗ ಬಹಳಷ್ಟು ಟೀಕೆ ಮಾಡಿದರು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅದಿಕಾರಕ್ಕೆ ಬಂದಂತೆ. ಇಂದಿರಾ ಗಾಂಧಿ ಅವರ ನುಡಿಮುತ್ತುಗಳನ್ನು ಸಂಗ್ರಹಿಸಿ ಸೋನಿಯಾ ಗಾಂಧಿ ಅವರು ಪುಸ್ತಕ ಬರೆದಿದ್ದರು. ಅದನ್ನು ನಾನು ಕನ್ನಡದಲ್ಲಿ ಅನುವಾದ ಮಾಡಿ ಪುಸ್ತಕ ಮಾಡಿ, ಇಂದು ಬಿಡುಗಡೆ ಮಾಡಿಸಿದ್ದೇನೆ” ಎಂದರು.

ಗೌರವ ಎಂಬುದು ಕೇಳಿ ಪಡೆಯುವಂತಹುದಲ್ಲ, ಗಳಿಸುವಂತಹದ್ದು. ಪ್ರೀತಿ ಕೊಡುವಂತಹದ್ದು, ಬಲವಂತವಾಗಿ ಪಡೆಯುವಂತಹದ್ದಲ್ಲ. ಜೀವನ ಅನುಭವಿಸುವಂತಹದ್ದು, ವಿವರಿಸುವಂತಹದ್ದಲ್ಲ ಎಂದು ಇಂದಿರಾ ಗಾಂಧಿ  ತಿಳಿಸಿದ್ದಾರೆ.  ಎದುರಾಳಿ ನಿನ್ನನ್ನು ನಿಯಂತ್ರಿಸುವ ಮುನ್ನ, ನೀನು ನಿನ್ನನ್ನು ನಿಯಂತ್ರಿಸಬೇಕು ಎಂದು ಹೇಳುತ್ತಾರೆ ಎಂದರು.

ಇಂದಿರಾ ಗಾಂಧಿ ಶತಮಾನ ಕಂಡ ಅತ್ಯುತ್ತಮ ನಾಯಕಿ,  ಅವರ ಆಡಳಿತದಲ್ಲಿ ಪಾಕಿಸ್ತಾನವನ್ನು ಇಬ್ಭಾಗ ಮಾಡಿ ಬಾಂಗ್ಲಾದೇಶ ರಚನೆಗೆ ಕಾರಣರಾದರು. ನೆರೆಯ ರಾಷ್ಟ್ರಗಳು ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ನಮ್ಮ ಮಿತ್ರರಾಗಿದ್ದವು. ಆದರೆ ಈಗ ನಮ್ಮ ನೆರೆ ರಾಷ್ಟ್ರಗಳಾದ ಭೂತಾನ್, ಬರ್ಮಾ ದೇಶಗಳು ನಮ್ಮ ಜೊತೆ ನಿಲ್ಲುತ್ತಿಲ್ಲ ಎಂದು ತಿಳಿಸಿದರು.

“ನಮ್ಮ ನಾಯಕರು ಮತಕಳ್ಳತನದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಸಹಿ ಸಂಗ್ರಹ ಅಭಿಯಾನ ಮಾಡಿದ್ದೇವೆ. ಬಿಹಾರ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಏನು ಹೆಚ್ಚುಕಮ್ಮಿಯಾಗಿದೆ ಎಂದು ಜನ ಚರ್ಚೆ ಮಾಡುತ್ತಿದ್ದಾರೆ.  ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ  ಎಂದರು.

ರಾಜಕೀಯದಲ್ಲಿ 33% ಮೀಸಲಾತಿ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಾವು ಮಹಿಳಾ ನಾಯಕತ್ವವನ್ನು ಬೆಳೆಸಬೇಕು.  ನಾಯಕರ ಕುಟುಂಬದವರನ್ನು ನಾಯಕರಾಗಿ ಬೆಳೆಯುವುದು ಮುಖ್ಯವಲ್ಲ, ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕು.  ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರಿಗೆ ಅರ್ಜಿ ಕರೆಯಲಾಗುವುದು. ಈಗ ಹೊಸ ಮತದಾರರ ಪಟ್ಟಿ ರಚನೆಯಾಗಲಿದೆ. ಕೂಡಲೇ ಮನೆ ಮನೆಗೆ ಹೋಗಿ ಖಾತಾ ಯೋಜನೆ, ಆಸ್ತಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ ಪ್ರಚಾರ ಮಾಡಬೇಕು ಎಂದು ಡಿಸಿಎಂ ಕರೆ ನೀಡಿದರು.

“ನಾನು ಈ ಹುದ್ದೆಯಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷವಾಗಿದೆ, ಮಾರ್ಚ್ ಬಂದರೆ ಆರು ವರ್ಷವಾಗಲಿದೆ. ಬೇರೆಯವರಿಗೆ ಅವಕಾಶ ನೀಡಬೇಕು. ನಾನು ನಾಯಕತ್ವದಲ್ಲಿ ಇರುತ್ತೇನೆ, ತಲೆಕೆಡಿಸಿಕೊಳ್ಳಬೇಡಿ. ನಾನು ಉಪಮುಖ್ಯಮಂತ್ರಿಯಾದ ದಿನವೇ ಈ ಹುದ್ದೆ ಬಿಡಬೇಕು ಎಂದು ನಿರ್ಧರಿಸಿದ್ದೆ. ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಇನ್ನು ಸ್ವಲ್ಪ ದಿನ ಮುಂದುವರಿಯಲು ಹೇಳಿದ್ದಾರೆ. ನಾನು ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ” ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಯುವ ಬಗ್ಗೆ ಕೇಳಿದಾಗ, “ಪಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಅದ್ಯಕ್ಷರಾದವರು ಹೇಗೆ ಕೆಲಸ ಮಾಡಬೇಕು ಎಂದು ನಾನು ಉದಾಹರಣೆಯಾಗಬೇಕು, ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿಯವರೆಗೂ ಜವಾಬ್ದಾರಿ ನಿಭಾಯಿಸಲು ಸೂಚಿಸುತ್ತಾರೋ ಅಲ್ಲಿಯವರೆಗೂ ನಾನು ಕರ್ತವ್ಯ ನಿಭಾಯಿಸುತ್ತೇನೆ” ಎಂದು ತಿಳಿಸಿದರು.

ನೂತನ ಕಚೇರಿಗಳ ಶಂಕುಸ್ಥಾಪನೆ ಯಾವಾಗ ಎಂದು ಕೇಳಿದಾಗ, “ನಾನು ಎಐಸಿಸಿ ನಾಯಕರ ಬಳಿ ದಿನಾಂಕ ಕೇಳಿದ್ದೇನೆ. ಆದಷ್ಟು ಬೇಗ ನೀಡುವುದಾಗಿ ಹೇಳಿದ್ದು, ನಾನು ಅದಕ್ಕಾಗಿ ಕಾಯುತ್ತಿರುವೆ” ಎಂದು  ಉತ್ತರಿಸಿದರು.

Related Posts

Leave a Reply

Your email address will not be published. Required fields are marked *