ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಿಂದ 11 ಜನ ಮೃತಪಟ್ಟ ಪ್ರಕರಣದ ತನಿಖೆ ಮುಗಿಸಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಗೆ ಹೈಕೋರ್ಟ್ ಸಮ್ಮತಿಸಿದೆ.
2,200ಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಈ ಸಾವುಗಳಿಗೆ ಆರ್‌ಸಿಬಿ ನೇರ ಹೊಣೆಯೆಂದು ಹೇಳಲಾಗಿದೆ. ತನಿಖೆ ವೇಳೆ ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ಘಟನೆಗೆ ನೇರ ಕಾರಣ ಎಂದು ಅವುಗಳ ವಿರುದ್ಧ ಹಲವು ಸಾಕ್ಷ್ಯಗಳು ಪತ್ತೆಯಾಗಿದೆ ಎನ್ನಲಾಗಿದೆ.
ಚಾರ್ಜ್ ಶೀಟ್‌ನಲ್ಲಿ ನೂರಾರು ಪ್ರತ್ಯಕ್ಷ ಸಾಕ್ಷಿ, ಸಿಸಿಟಿವಿ, ಗಾಯಾಳುಗಳ ಹೇಳಿಕೆ ದಾಖಲಿಸಲಾಗಿದೆ. ದುರಂತಕ್ಕೆ ಮೂರು ಸಂಸ್ಥೆಗಳನ್ನು ಸಿಐಡಿ ನೇರ ಹೊಣೆ ಮಾಡಿದೆ. ಸರಿ ಪ್ಲಾನ್ ಇಲ್ಲದೆ ಕಾರ್ಯಕ್ರಮ ಆಯೋಜನೆ, ಕಾರ್ಯಕ್ರಮ ಆಯೋಜನೆಗೂ ಮುನ್ನ ಸರಿಯಾಗಿ ಸಭೆ ನಡೆಸದಿರುವುದು, ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡದೆ ಇರುವುದು ತನಿಖೆ ವೇಳೆ ಗೊತ್ತಾಗಿದೆ.
ಟಿಕೆಟ್ ಬಗ್ಗೆ ಆರ್‌ಸಿಬಿ ಗೊಂದಲ ಹುಟ್ಟಿಸಿದು ಮೊದಲ ಕಾರಣ. ಡಿಎನ್‌ಎ ಕಡೆಯಿಂದ ಸೆಕ್ಯುರಿಟಿ ಪ್ಲಾನ್ ಇರಲಿಲ್ಲ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಬಳಕೆ ವಿಫಲವಾಗಿದೆ. ಪೊಲೀಸರ ಜೊತೆ ಸರಿ ಮಾತುಕತೆ ನಡೆಸದೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಗೊತ್ತಾಗಿದೆ.
ಎಲ್ಲಾ ಗೇಟ್ ಬಳಿಯ ಸಿಸಿಟಿವಿ ಪರಿಶೀಲನೆ, ವೀಡಿಯೊದಲ್ಲಿದ್ದವರ ಹೇಳಿಕೆ, ಪ್ರತೀ ಗೇಟ್ನ ಸೆಕ್ಯುರಿಟಿ, ಡ್ಯೂಟಿಗೆ ಹಾಜರಾಗಿದ್ದ ಪೊಲೀಸರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಗಾಯಾಳು ಹೇಳಿಕೆ, ಗಾಯಾಳುಗಳನ್ನು ಸಾಗಿಸಿದವರ ಹೇಳಿಕೆ ಸೇರಿ ನೂರಾರು ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿ ಇದೆ.


