ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್ ಹರಿಹರೇಶ್ವರ ದೇವಸ್ಥಾನದ ಬಳಿ ತಾಯಿಯೊಬ್ಬರು ಮಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ರಮ್ಯ(22) ತಾಯಿಯಿಂದ ಗಂಭೀರ ಹಲ್ಲೆಗೆ ಒಳಗಾದ ಮಗಳು. ರಮ್ಯ ಪದೇ ಪದೆ ಗಂಡನ ಜೊತೆ ಜಗಳವಾಡಿ ತವರುಮನೆಗೆ ಬರುತ್ತಿದ್ದರು. ಮಂಗಳವಾರ ಕೂಡ ಹಾಗೇ ಬಂದಿದ್ದರು. ಇದರಿಂದ ಬೇಸತ್ತ ತಾಯಿ ಸರೋಜಮ್ಮ ಮಗಳಿಗೆ ಬುದ್ದಿ ಹೇಳಿದ್ದಾರೆ, ಆಗ ಮಾತಿಗೆ ಮಾತು ಬೆಳೆದು ಮಚ್ಚಿನಿಂದ ಮಗಳ ಕುತ್ತಿಗೆ ಕಡಿದಿದ್ದಾರೆ.
ಗಾಯಾಳು ರಮ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆಗೈದ ತಾಯಿ ಪರಾರಿಯಾಗಿದ್ದು, ಸಂಪಿಗೆಹಳ್ಳಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಥಣಿ ಕೋರ್ಟ್ ಆವರಣದಲ್ಲೇ ಪತ್ನಿಗೆ ಹಲ್ಲೆಗೈದ ಪತಿ
ಜಮೀನು ವಿವಾದದ ವಿಚಾರಣೆ ದಾವೆ ವೇಳೆ ನ್ಯಾಯಾಲಯದ ಆವರಣದಲ್ಲಿ ಕೋರ್ಟ್ ಕಲಾಪಕ್ಕೆ ಬಂದಿದ್ದ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಅಥಣಿಯಲ್ಲಿ ನಡೆದಿದೆ.
ಘಟನೆಯಲ್ಲಿ ಮಹಿಳೆಯ ತಲೆ ಹಾಗೂ ಎಡಗೈಗೆ ಗಂಭೀರ ಗಾಯವಾಗಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಣೆ ಮೂಲದ ಮೀನಾಕ್ಷಿ ರಾಮಚಂದ್ರ ಶಿಂಧೆ (45) ಹಲ್ಲೆಗೊಳಗಾದ ಮಹಿಳೆ.
ಬಾಳಾಸಾಹೇಬ (ಬಂಡು) ಚವ್ಹಾಣ ಪ್ರಕರಣದ ಆರೋಪಿ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ನ್ಯಾಯಾಲಯದಲ್ಲಿ ಕಲಾಪಕ್ಕೆ ಹಾಜರಾಗಲು ಮೀನಾಕ್ಷಿ ಬರುತ್ತಿದ್ದಾಗ ಹಿಂಬದಿಯಿಂದ ಮಾರಕಾಸ್ತ್ರ ಹಿಡಿದು ಬಂದ ಬಾಳಾಸಾಹೇಬ ಚೌಹಾಣ್ ಮೀನಾಕ್ಷಿ ಮೇಲೆಹಲ್ಲೆ ನಡೆಸಿದ್ದಾನೆ. ಕೋತನಟ್ಟಿ ಗ್ರಾಮದಲ್ಲಿನ ಜಮೀನಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ.


