ದೆಹಲಿ ಕೆಂಪು ಕೋಟೆ ಬಳಿ ಕಾರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳು ಸ್ಫೋಟಕ ತಯಾರಿಸುವ ಕುರಿತು ವರದಿ ಪ್ರಕಟಿಸಿದ್ದು, ಈ ಬೇಜವಾಬ್ದಾರಿತನದ ಕಾರ್ಯವೈಖರಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂಥ ಮಾಧ್ಯಮಗಳಿಗೆ ಸೂಚನೆಗಳನ್ನು ನೀಡಿದ್ದು, ಕಾನೂನುಬಾಹಿರ ಚಟುವಟಿಕೆಗಳಿಗೆ ಸಹಾಯ ಮಾಡುವ, ಪ್ರೋತ್ಸಾಹಿಸುವ ಅಥವಾ ಉತ್ತೇಜಿಸುವ ದೃಶ್ಯಗಳನ್ನು ಪ್ರಸಾರ ಮಾಡದಂತೆ ತಾಕೀತು ಮಾಡಿದೆ.
ಕೆಲವು ಸುದ್ದಿ ವಾಹಿನಿಗಳು ಕಾರು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸಂಬಂಧಿಸಿದ ವಿಷಯವನ್ನು ಪ್ರಸಾರ ಮಾಡುವ ಮೂಲಕ ಹಿಂಸಾಚಾರವನ್ನು ಸಮರ್ಥಿಸುತ್ತಿವೆ. ಸ್ಫೋಟಕ ವಸ್ತುಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಮಾಹಿತಿ ವೀಡಿಯೊಗಳನ್ನು ಪ್ರಸಾರ ಮಾಡುತ್ತಿವೆ ಎಂಬುದು ಗಮನಕ್ಕೆ ಬಂದಿರುವುದಾಗಿ ಸಚಿವಾಲಯ ಹೇಳಿದೆ.
ಅಂಥ ಕಾರ್ಯಕ್ರಮದ ಪ್ರಸಾರ ಹಿಂಸಾಚಾರವನ್ನು ಪ್ರಚೋದಿಸಬಹುದು, ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸಬಹುದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಮಾಡಬಹುದು. ಇಂಥ ವರದಿ ಮಾಡುವಾಗ ವಿವೇಚನೆ ಮತ್ತು ಸೂಕ್ಷ್ಮತೆ ಇರಬೇಕು ಎಂದು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು (ನಿಯಂತ್ರಣ) ಕಾಯ್ದೆ, 1995 ರ ವಿಭಾಗಗಳನ್ನು ಸಚಿವಾಲಯ ಉಲ್ಲೇಖಿಸಿದೆ ಎಚ್ಚರಿಸಿದೆ.
ಹಿಂಸಾಚಾರವನ್ನು ಪ್ರೋತ್ಸಾಹಿಸುವ ಅಥವಾ ಪ್ರಚೋದಿಸುವ ಸಾಧ್ಯತೆ ಇರುವ, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಗೆ ವಿರುದ್ಧವಾದ ಅಥವಾ ರಾಷ್ಟ್ರವಿರೋಧಿ ಮನೋಭಾವಗಳನ್ನು ಉತ್ತೇಜಿಸುವ, ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವ ಯಾವುದೇ ದೃಶ್ಯಗಳನ್ನು ಪ್ರಸಾರವಾಗುವ ಕಾರ್ಯಕ್ರಮವು ಒಳಗೊಂಡಿರಬಾರದು ಎಂದು ಕಾಯ್ದೆಯು ಹೇಳುತ್ತದೆ ಎಂಬುದನ್ನು ಸಚಿವಾಲಯ ಎಚ್ಚರಿಕೆಯೊಂದಿಗೆ ಪ್ರಸ್ತಾಪಿಸಿದೆ. ಇಂಥ ದೃಶ್ಯಗಳನ್ನು ಪ್ರಸಾರ ಮಾಡಬಾರದೆಂದು ವಾಹಿನಿಗಳಿಗೆ ಸಲಹೆ ನೀಡಿದೆ.


