Wednesday, November 19, 2025
Menu

ಪ್ಯಾಲೆಸ್ತೀನಿಯರ ಲೆಬನಾನ್‌ ನಿರಾಶ್ರಿತರ ಶಿಬಿರಕ್ಕೆ ಇಸ್ರೇಲ್ ವೈಮಾನಿಕ ದಾಳಿ: 13 ಸಾವು

ದಕ್ಷಿಣ ಲೆಬನಾನ್​ನ ಪ್ಯಾಲೆಸ್ತೀನಿಯರ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು 13 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಒಂದು ವರ್ಷದ ಹಿಂದೆ ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮದ ನಂತರ ಲೆಬನಾನ್ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದೆಂದು ಹೇಳಲಾಗಿದೆ.

ಸಿಡಾನ್‌ನ ಹೊರವಲಯದಲ್ಲಿರುವ ಐನ್ ಎಲ್-ಹಿಲ್ವೆ ನಿರಾಶ್ರಿತರ ಶಿಬಿರದಲ್ಲಿರುವ ಮಸೀದಿಯ ಪಾರ್ಕಿಂಗ್ ಸ್ಥಳದಲ್ಲಿ ದಾಳಿ ನಡೆದಿದೆ. ಇಸ್ರೇಲ್ ವಿರುದ್ಧ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಹಮಾಸ್ ತರಬೇತಿ ಆವರಣದ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಹಮಾಸ್ ಗುಂಪು ಎಲ್ಲೆಲ್ಲಿ ಕಾರ್ಯನಿರ್ವಹಿಸುತದೋ ಅಲ್ಲೆಲ್ಲ ಇಸ್ರೇಲ್ ಸೇನೆಯು ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದೆ.

ಲೆಬನಾನ್ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗಳಲ್ಲಿ ಎರಡು ವರ್ಷದ ಅವಧಿಯಲ್ಲಿ ಉಗ್ರಗಾಮಿ ಹಿಜ್ಬುಲ್ಲಾ ಗುಂಪಿನ ಹಲವಾರು ಅಧಿಕಾರಿಗಳು ಹಾಗೂ ಹಮಾಸ್​ನ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. 2024ರ ಜನವರಿಯಲ್ಲಿ ಬೈರುತ್‌ನ ದಕ್ಷಿಣ ಉಪನಗರದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಹಮಾಸ್‌ ಮುಖ್ಯಸ್ಥ ಮತ್ತು ಗುಂಪಿನ ಮಿಲಿಟರಿ ವಿಭಾಗದ ಸಂಸ್ಥಾಪಕ ಸಲೇಹ್ ಅರೌರಿ ಮೃತಪಟ್ಟಿದ್ದ.

2023ರ ಅಕ್ಟೋಬರ್‌ನಲ್ಲಿ ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,200 ಜನರು ಸತ್ತಿದ್ದು, ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿಗೆ ಕಾರಣವಾಗಿ ಹತ್ತಾರು ಸಾವಿರ ಪ್ಯಾಲೆಸ್ತೀನಿಯರನ್ನು ಕೊಲ್ಲಲಾಗಿತ್ತು ಎಂದು ಗಾಜಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ನಂತರ ಹಿಜ್ಬುಲ್ಲಾ ಪಡೆ ಗಡಿಯುದ್ದಕ್ಕೂ ಇಸ್ರೇಲ್‌ ಠಾಣೆಗಳ ಕಡೆಗೆ ರಾಕೆಟ್‌ಗಳನ್ನು ಹಾರಿಸಲು ಪ್ರಾರಂಭಿಸಿತು. ಇಸ್ರೇಲ್ ಲೆಬನಾನ್‌ನಲ್ಲಿ ಶೆಲ್ ದಾಳಿ ಮತ್ತು ವೈಮಾನಿಕ ದಾಳಿಯೊಂದಿಗೆ ಪ್ರತಿಕ್ರಿಯಿಸಿತು. 2024 ರ ಸೆಪ್ಟಂಬರ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟು, ಮುಂದುವರಿಯುತ್ತಲೇ ಇದೆ.

Related Posts

Leave a Reply

Your email address will not be published. Required fields are marked *