ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಸಂಬಂಧಿಯಾಗಿರುವ ವ್ಯಕ್ತಿ ಅತ್ಯಾಚಾರ ನಡೆಸಿದ್ದು, ಆಕೆ ಗರ್ಭಿಣಿಯಾಗಿರುವ ವಿಚಾರ ಬಹಿರಂಗಗೊಂಡಿದೆ.
ಬಾಲಕಿಯನ್ನು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆ ಯಾದಗಿರಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಂತ್ರಸ್ತೆಯು ಅತ್ಯಾಚಾರಿಯ ಪತ್ನಿಯ ತಂಗಿ. ಆಕೆ ಎರಡು ತಿಂಗಳ ಗರ್ಭಿಣಿಯಾಗಿದ್ದು, ವೈದ್ಯರು ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆರೋಪಿ ನಾಪತ್ತೆಯಾಗಿದ್ದು, ಅವನನ್ನು ಬಂಧಿಸಲು ಕೆಂಭಾವಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದಬಳಿಕ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸುಂಭೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ತಕ್ಷಣ ಪ್ರಕರಣ ದಾಖಲಿಸಿ ಸಂತ್ರಸ್ತೆಗೆ ಸಂಪೂರ್ಣ ರಕ್ಷಣೆ ಮತ್ತು ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಆಯೋಗ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.


