ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೆಸರಲ್ಲಿ ಸೈಬರ್ ವಂಚಕ ಬೆಂಗಳೂರಿನ ವ್ಯಕ್ತಿಯೊಬ್ಬರಿಂದ 42 ಲಕ್ಷ ರೂ. ದೋಚಿಕೊಂಡಿದ್ದಾನೆ. ಅಪರಿಚಿತ ವ್ಯಕ್ತಿ ಅಧಿಕ ಲಾಭದ ಆಮಿಷ ಒಡ್ಡಿದ್ದನ್ನು ನಂಬಿ ಹಣ ಹೂಡಿಕೆ ಮಾಡಿದ್ದ ವ್ಯಕ್ತಿ ಈಗ ಇದ್ದ ಹಣವೆಲ್ಲ ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾಗಿರುವ ಬಗ್ಗೆ ತಿಳಿಯುತ್ತಿದ್ದಂತೆಯೇ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸಂತ್ರಸ್ತ ವ್ಯಕ್ತಿಗೆ ಬೆಂಗಳೂರಿನ ವ್ಯಕ್ತಿಗೆ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಬಗ್ಗೆ ಇನ್ಸ್ಟಾಗ್ರಾಂ ಮೂಲಕ ಮಾಹಿತಿ ದೊರೆತಿದ್ದು, ಅಶುತೋಷ್ ಶರ್ಮಾ ಎಂಬ ವ್ಯಕ್ತಿ ಕ್ರಿಪ್ಟೋ ಹೂಡಿಕೆಗಳ ಕುರಿತು ಮಾರ್ಗದರ್ಶನ ನೀಡುತ್ತಿದ್ದ. ಬಳಿಕ ಇದಕ್ಕೆ ಸಂಬಂಧಿಸಿದ ಟೆಲಿಗ್ರಾಂ ಗುಂಪನ್ನು ಪರಿಚಯಿಸಿದ್ದ. ಹೂಡಿಕೆ ಹಣಕ್ಕೆ ಶೇ. 15 ಲಾಭ ನೀಡುವ ಭರವಸೆ ಹಿನ್ನಲೆ ಸ್ವಲ್ಪ ಹಣ ಸಂತ್ರಸ್ತ ಹೂಡಿಕೆ ಮಾಡಿದ್ದರು. ಲಾಭ ತನ್ನ ಖಾತೆಗೆ ಜಮಾ ಆಗುತ್ತಿದ್ದ ಕಾರಣ ಸೈಬರ್ ವಂಚಕರನ್ನು ಮತ್ತಷ್ಟು ನಂಬಿ ಹೆಚ್ಚಿನ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ಸಂತ್ರಸ್ತ ವ್ಯಕ್ತಿಯ ಟ್ರೇಡಿಂಗ್ ಖಾತೆಯಲ್ಲಿ 138,687.22 USDT ಬ್ಯಾಲೆನ್ಸ್ ತೋರಿಸುತ್ತಿತ್ತು. ಹಣವನ್ನು ಪಡೆಯಲು ಪ್ರಯತ್ನಿಸಿದಾಗ, ಆಪರೇಟರ್‌ಗಳು ಬ್ಯಾಂಕ್ ವಿವರಗಳು ತಪ್ಪಾಗಿದೆ ಎಂದು ಹೇಳಿದ್ದರು. ಅದನ್ನು ಸರಿಪಡಿಸಲು 4 ಲಕ್ಷ ಪಾವತಿಸಬೇಕೆಂದು ತಿಳಿಸಿದ್ದರು. ನಂತರ ತಡ ಪಾವತಿ ದಂಡ, ಕರೆನ್ಸಿ ಪರಿವರ್ತನೆ ಶುಲ್ಕ ಮತ್ತು RBI ತೆರಿಗೆ ಹೆಸರಿನಲ್ಲಿ ಇನ್ನಷ್ಟು ಹಣದ ಬೇಡಿಕೆ ಇಟ್ಟಿದರು. ಸಂತ್ರಸ್ತ ವ್ಯಕ್ತಿ ಡಿಜಿಟಲ್ ಸಾಲದಾತರಿಂದ ಹಾಗೂ ಸ್ನೇಹಿತರಿಂದ ಹಣ ಪಡೆದು ಆರೋಪಿಗಳ ಖಾತೆಗಳಿಗೆ ಹಣ ವರ್ಗಾಯಿಸಿರುವುದು ತನಿಖೆ ವೇಳೆ ಗೊತ್ತಾಗಿದೆ.
ಜುಲೈ 3ರಿಂದ ಆಗಸ್ಟ್ 1ರವರೆಗೆ ಒಟ್ಟು 42.62 ಲಕ್ಷ ರೂ. ದೂರುದಾರ ವ್ಯಕ್ತಿ ಪಾವತಿಸಿದ್ದರೂ ಆತನ ಖಾತೆಯಿಂದ ಹಣ ಪಡೆಯಲು ಸಾಧ್ಯವಾಗಲಿಲ್ಲ. ಇದು ವಂಚನೆ ಎಂದು ತಿಳಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.


