ಹಾವೇರಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ಗಳ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎನ್ನಲಾಗುತ್ತಿದೆ.
ಮಹಿಳೆ ಆಸ್ಪತ್ರೆಯ ಶೌಚಾಲಯಕ್ಕೆ ಹೋಗುತ್ತಿರುವಾಗಲೇ ಹೆರಿಗೆಯಾಗಿದ್ದು, ನವಜಾತ ಶಿಶುವಿಗೆ ಪೆಟ್ಟಾಗಿ ಮೃತಪಟ್ಟಿದೆ. ಇದಕ್ಕೆ ಆಸ್ಪತ್ರೆಯ ಸಿಬ್ಬಂದಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ರಾಣೆಬೆನ್ನೂರಿನ ಕಾಕೋಳ ಗ್ರಾಮ ರೂಪಾ ಗಿರೀಶ್ ಕರಬಣ್ಣನವರ ಎಂಬ ಮಹಿಳೆಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರತರಲಾಗಿತ್ತು. ಬಳಿಕ, ಹೆರಿಗೆ ನೋವು ಹೆಚ್ಚಿದ್ದರೂ ಬೆಡ್ ನೀಡಿರಲಿಲ್ಲ. ನೆಲದ ಮೇಲೆಯೇ ಅವರನ್ನು ಕೂರಿಸಿದ್ದರು. ಶೌಚಾಲಯ ಎಲ್ಲಿದೆ ಎಂದು ಕೇಳಿದರೂ ಸಿಬ್ಬಂದಿ ಮಾಹಿತಿ ಕೊಡಲಿಲ್ಲ. ಕೊನೆಗೆ ಹೇಗೋ ಕೇಳಿಕೊಂಡು ಶೌಚಾಲಯಕ್ಕೆ ತೆರಳುತ್ತಿರುವಾಗ ಹೆರಿಗೆ ಆಗಿದೆ. ಅಲ್ಲೇ ಹೆರಿಗೆಯಾದ ಕಾರಣ ಮಗುವಿಗೆ ಪೆಟ್ಟಾಗಿ ಮಗು ಮೃತ ಪಟ್ಟಿದೆ. ಸೂಕ್ತ ಚಿಕಿತ್ಸೆ ಕೊಡದೇ ವೈದ್ಯರು, ನರ್ಸ್ಗಳು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಮಗು ಸಾವನ್ನಪ್ಪಿದೆ ಎಂದು ರೂಪಾ ಸಂಬಂಧಿಕರು ದೂರಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಪಿ. ಆರ್. ಹಾವನೂರ್, ರೂಪಾ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದು, ವೈದ್ಯರು ತಪಾಸಣೆ ನಡೆಸಿದ್ದಾರೆ. ನಿನ್ನೆಯಿಂದ ಹೊಟ್ಟೆಯಲ್ಲಿ ಮಗುವಿನ ಚಲನವಲನ ಇಲ್ಲ ಎಂದು ಮಹಿಳೆ ಹೇಳಿದ್ದು, ಹೊಟ್ಟೆಯಲ್ಲಿ ಮಗು ಮೃತಪಟ್ಟಿತ್ತು. ಶೌಚಾಲಯಕ್ಕೆ ತೆರಳುವ ಸಂದರ್ಭದಲ್ಲಿ ಹೆರಿಗೆ ನೋವು ಹೆಚ್ಚಾಗಿದೆ. ಈ ವೇಳೆ ನರ್ಸ್ ಕರೆದುಕೊಂಡು ಬಂದು ನೋಡಿದ್ದಾರೆ. ಮಹಿಳೆಗೆ ಬಿಪಿ ಹೆಚ್ಚಿತ್ತು. ಇನ್ನೂ ಮೂರು ಹೆರಿಗೆ ಇದ್ದ ಕಾರಣ ಸಿಬ್ಬಂದಿಯೂ ಬ್ಯುಸಿ ಇದ್ದರು. ಇದೇ ವೇಳೆ ಅವರು ಶೌಚಾಲಯಕ್ಕೆ ತೆರಳಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.


