Tuesday, November 18, 2025
Menu

ಮೆಟ್ರೋ ವಿಸ್ತರಣೆಯಿಂದ ಅಭಿವೃದ್ಧಿ, ರಾಜಕೀಯ ಬೇಡ: ಪರಮೇಶ್ವರ್ ಮನವಿ

ಬೆಂಗಳೂರು-ತುಮಕೂರು ಮೆಟ್ರೋ ಯೋಜನೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ ಎಂದು ಎಂದು ಗೃಹ ಸಚಿವ ಡಾ‌. ಜಿ. ಪರಮೇಶ್ವರ್ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ತುಮಕೂರಿಗೆ ಮೆಟ್ರೋ ವಿಸ್ತರಣೆಯಿಂದ ಆಗುವ ಅನೇಕ ಅನುಕೂಲತೆಗಳ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಗಮನದಲ್ಲಿಲ್ಲ. ಇದೇ ಕಾರಣದಿಂದ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪ್ರತಿನಿತ್ಯ ತುಮಕೂರಿನಿಂದ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ನೆಲಮಂಗಲ, ದಾಬಸ್‌ಪೇಟೆ, ಕ್ಯಾತ್ಸಂದ್ರ ವೇಗವಾಗಿ ಬೆಳೆಯುತ್ತಿವೆ. ಕೈಗಾರಿಕೆ ಉದ್ದೇಶದಿಂದ ಜನರ ಸಂಚಾರ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಒತ್ತಡ ಜಾಸ್ತಿ ಇದೆ. ನೀರಿಗೆ ಕಷ್ಟ, ಓಡಾಡೋಕೆ ಟ್ರಾಫಿಕ್ ಸಮಸ್ಯೆ. ಇದೆಲ್ಲ ನೋಡಿಕೊಂಡು ಆ ಕಡೆ ಜೀವನ ನಡೆಸುತ್ತಿದ್ದಾರೆ ಎಂದರು.

ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಿಸಲಾಗಿದೆ. ಈಗಾಗಲೇ 200 ಕೈಗಾರಿಕೆಗಳು ಬಂದಿವೆ. ಫುಡ್‌ಪಾರ್ಕ್, ಟೈಮೆಕ್ ಜಪಾನೀಸ್ ಫ್ಯಾಕ್ಟರಿ, ಜಪಾನೀಸ್ ಟೌನ್‌ಶಿಪ್‌ಗೆ ಜಾಗ ಕೊಟ್ಟಿದ್ದೇವೆ. ಇಷ್ಟು ವೇಗವಾಗಿ ಬೆಳೆಯುತ್ತಿರುವಾಗ ಸಂಪರ್ಕ (ಕನೆಕ್ಟಿವಿಟಿ) ವ್ಯವಸ್ಥೆ ಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ರಸ್ತೆ, ಮೆಟ್ರೋ, ರೈಲು ಸಂಪರ್ಕ ಇದ್ದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ಉದ್ದೇಶ. ರಾಮನಗರ, ಕೋಲಾರ, ತುಮಕೂರು ನಗರಗಳನ್ನು ಬೆಳೆಸಿದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎರಡು ವರ್ಷದ ಹಿಂದೆಯೇ ತುಮಕೂರಿಗೆ ಮೆಟ್ರೋ ಯೋಜನೆ ತೆಗೆದುಕೊಂಡು ಹೋಗಬೇಕು ಎಂದು ಪ್ರಸ್ತಾಪ ಮಾಡಿದ್ದೆ. ಮುಖ್ಯಮಂತ್ರಿಗಳು ಫಿಸಿಬಲಿಟಿ ಸ್ಟಡಿ ಮಾಡುವುದಾಗಿ 2024ರ ಬಜೆಟ್‌ನಲ್ಲಿ ಘೋಷಿಸಿದ್ದರು. ಫಿಸಿಬಲಿಟಿ ವರದಿಯಲ್ಲಿ ತುಮಕೂರು ಮೆಟ್ರೋ ಯೋಜನೆ ಬಗ್ಗೆ ಪಾಸಿಟಿವ್ ಆಗಿ ಕೊಟ್ಟಿದ್ದಾರೆ. ಎಲ್ಲರೊಂದಿಗೆ ಚರ್ಚೆ ಮಾಡಿ ಡಿಪಿಆರ್ ಮಾಡಲು ಅನುಮತಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಎರಡು-ಮೂರು ಕಂಪನಿಗಳು ಪಿಪಿಪಿ ಮಾದರಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಹೂಡಿಕೆ ಮಾಡಲು ಸಿದ್ಧರಿದ್ದೇವೆ ಎಂಬುದಾಗಿ ಕತಾರ್ ಮೂಲದ ಕಂಪನಿಯವರು ಮುಖ್ಯಮಂತ್ರಿಯವರಿಗೆ ಅಧಿಕೃತವಾಗಿ ಪತ್ರ ನೀಡಿದ್ದಾರೆ. ಇಷ್ಟೆಲ್ಲ ಆಗಿರುವಾಗ, ಸಂಸದ ತೇಜಸ್ವಿ ಸೂರ್ಯ ಏನೂ ಅರಿಯದೆ, ಯಾವ ಉದ್ದೇಶಕ್ಕಾಗಿ ಆ ರೀತಿಯಾಗಿ ಮಾತಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ‌. ಈ ಬಗ್ಗೆ ನಾನು ಅವರೊಂದಿಗೆ ಮಾತಾಡುತ್ತೇನೆ‌. ಇದು ಸಂಘರ್ಷದ ಪ್ರಶ್ನೆಯಲ್ಲ. ‘ನಮಗೆ ಬೇಕು, ನಿಮಗೆ ಬೇಡ. ನಮಗೆ ಬೇಡ, ನಿಮಗೆ ಬೇಕು’ ಎಂಬ ಪ್ರಶ್ನೆಯೂ ಅಲ್ಲ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ನಾವು ಯೋಚನೆ ಮಾಡಬೇಕು‌ ಎಂದು ಪರಮೇಶ್ವರ್​ ಹೇಳಿದರು.

ನಾವು ಅಧಿಕಾರದಲ್ಲಿದ್ದಾಗ ಒಂದು ಹೇಳಬಹುದು. ಮತ್ತೊಬ್ಬರು ಅಧಿಕಾರದಲ್ಲಿದ್ದಾಗ ಮತ್ತೊಂದು ಹೇಳಬಹುದು. ಆ ರೀತಿ ಆದರೆ ರಾಜ್ಯ ಬೆಳೆಯುವುದಿಲ್ಲ. ಕರ್ನಾಟಕ ಪ್ರಗತಿಯ ರಾಜ್ಯ‌. ಎಲ್ಲರೂ ನಮ್ಮ ರಾಜ್ಯದ ಕಡೆ ನೋಡುತ್ತಿದ್ದಾರೆ. ನಾನು ಅನೇಕ ದೇಶಗಳಿಗೆ ಹೋಗಿದ್ದೇನೆ. ಟೋಕಿಯೋದಲ್ಲಿ ನರೀಟ ಏರ್‌ಪೋರ್ಟ್ 70 ಕಿ.ಮೀ. ದೂರದಲ್ಲಿದೆ. ಮಲೇಷ್ಯಾದಲ್ಲಿ ಕೌಲಲಾಂಪುರಗೆ 20 ನಿಮಿಷದಲ್ಲಿ ಹೋಗುತ್ತಾರೆ. ಆ ರೀತಿ ಪಾಸಿಟಿವ್ ಆಗಿ ಯೋಚಿಸಬೇಕು. ನೆಗಿಟಿವ್ ಆಗಿ ಯೋಚಿಸಬೇಕಿಲ್ಲ ಎಂದರು.

ನಾನು ಏಕಾಏಕಿಯಾಗಿ ಬಿಜೆಪಿಯವರು ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಲು ಹೋಗುವುದಿಲ್ಲ. ಅವರು ನಡೆದುಕೊಳ್ಳುವ ರೀತಿಯ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಕರ್ನಾಟಕ ಅಭಿವೃದ್ಧಿಯಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಓದಲು ಕರ್ನಾಟಕಕ್ಕೆ ಬರುತ್ತಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜುಗಳಿವೆ. ಅಲ್ಲಿಗೆ ಯಾಕೆ ಓದಲು ಹೋಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ಬರುತ್ತಿದ್ದಾರೆ. ಕರ್ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾವು ನೋಡಬೇಕೆ ಹೊರತು, ಬೇರೆ ವಿಚಾರಗಳಿಂದಲ್ಲ ಎಂದು ಹೇಳಿದರು‌.

Related Posts

Leave a Reply

Your email address will not be published. Required fields are marked *