ಮಂಡ್ಯದ ಶಿವನ ಸಮುದ್ರದ ನಾಲೆಗೆ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸತತ 3 ಗಂಟೆಗಳ ಕಾರ್ಯಾಚರಣೆ ನಂತರ ರಕ್ಷಿಸಿದ್ದಾರೆ.
ಶಿವನಸಮುದ್ರದ ನಾಲೆಗೆ ಬಿದ್ದಿದ್ದ ಕಾಡಾನೆ ಹೊರಗೆ ಬರಲು ಆಗದೇ ಕಳೆದೆರಡು ದಿನಗಳಿಂದ ಬಳಲುತ್ತಿತ್ತು. ಎರಡು ದಿನಗಳಿಂದ ಆಹಾರ ಇಲ್ಲದೇ ಹಾಗೂ ಸೊಂಡಿಲಿಗೆ ಸೋಂಕು ತಗುಲಿದ್ದರಿಂದ ಆನೆ ಪರದಾಟ ನೋಡಲು ಆಗುತ್ತಿರಲಿಲ್ಲ.
ನಾಲೆಯಲ್ಲಿ ಆನೆ ಸಿಲುಕಿರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸತತ ಮೂರು ಗಂಟಗಳ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ರಕ್ಷಿಸಿದ್ದು, ಸೂಕ್ತ ಚಿಕಿತ್ಸೆ ನಂತರ ಬಿಡಲು ನಿರ್ಧರಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಸುಮಾರು 30 ಸಿಬ್ಬಂದಿ ಆನೆಗೆ ಎರಡು ಬಾರಿ ಅರವಳಿಕೆ ನೀಡಿದರು. ಮೊದಲ ಬಾರಿ ಅರವಳಿಕೆ ನೀಡಿದ್ದರಿಂದ ವಿಚಲಿತಗೊಂಡ ಆನೆ ಒದ್ದಾಟ ನಡೆಸಿತು. ಇದರಿಂದ ಮತ್ತೊಂದು ಅರವಳಿಕೆ ನೀಡಲಾಯಿತು.
ಎರಡನೇ ಬಾರಿ ಅರವಳಿಕೆ ನೀಡಿದಾಗ ಕಾಡಾನೆ ಪ್ರಜ್ಞೆ ಕಳೆದುಕೊಂಡಿದ್ದು, ಕ್ರೇನ್ ಸಹಾಯದಿಂದ ನೀರಿಗೆ ಬಿದ್ದಿದ್ದ ಆನೆಯನ್ನು ಮೇಲಕ್ಕೇತ್ತಿ ಟ್ರೇಲರ್ ಹೊಂದಿದ್ದ ಲಾರಿ ಮೇಲೆ ಮಲಗಿಸಿ ಕರೆದೊಯ್ದರು.


