Wednesday, August 06, 2025
Menu

ದೇವರ ಹೆಸರಿನಲ್ಲಿ 2.37 ಕೋಟಿ ರೂ. ವಂಚಿಸಿದ ದಂಪತಿ!

ಮೈಸೂರು: ದೇವರ ಹೆಸರಿನಲ್ಲಿ ದಕ್ಷಿಣ ಕನ್ನಡ ಮೂಲದ ದಂಪತಿ ಸುಮಾರು 2.50 ಕೋಟಿ ರೂ. ವಂಚಿಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ನಗರದ ಜೆಎಸ್‌ಎಸ್ ಲೇಔಟ್‌ನ ನಿವಾಸಿ ಅರುಣ್​ಕುಮಾರ್ (54) ಎಂಬುವವರು ದೇವರ ಹೆಸರಿನಲ್ಲಿ ತಮಗೆ 2.19 ಕೋಟಿ ರೂ. ಹಾಗೂ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚಿಸಿದ್ದಾರೆ ಎಂದು ದಕ್ಷಿಣ ಕನ್ನಡದ ಸಂದೇಶ್ ಹಾಗೂ ಮೈಸೂರಿನ ರೂಪಶ್ರೀ ಕುಮಾರ್ ದಂಪತಿ ವಿರುದ್ದ ದೂರು ನೀಡಿದ್ದು,  ಸಿಇಎನ್​ ಠಾಣೆ ಪೊಲೀಸರು​ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?

ಅರುಣ್‌ಕುಮಾರ್ ಅವರಿಗೆ 2017ರಲ್ಲಿ ಆರೋಪಿ ರೂಪಶ್ರೀ ಕುಮಾರ್ ಅಪ್ಪಾಜಿ ಎಂಬ ಗುರುಗಳು ಇದ್ದಾರೆ. ಹಿಮಾಲಯ, ಕೇರಳ ಕಡೆಗಳಲ್ಲಿ ತಪಸ್ಸಿಗೆ ಹೋಗುವ ಅವರು ನಮ್ಮ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಿದ್ದಾರೆ ಎಂಬುದಾಗಿ ನಂಬಿಸಿದ್ದಾರೆ. ಗುರುಗಳು ನಿಮಗೆ ಸಿಗುವುದಿಲ್ಲ, ಮೊಬೈಲ್ ನಂಬರ್‌ ಕೊಟ್ಟರೆ ಅವರೇ ಕರೆ ಮಾಡಿ ಕಷ್ಟಸುಖ ವಿಚಾರಿಸಿ ಪರಿಹಾರ ಮಾಡುತ್ತಾರೆಂದು ತಿಳಿಸಿದ್ದಾರೆ.

ಅಪ್ಪಾಜಿ ಎಂಬವರು ನನಗೆ ಹಲವು ಸಲ ಕರೆ ಮಾಡಿ, ಕೆಲಸಕ್ಕೆ ಹೋಗುವ ಸಮಯದಲ್ಲಿ ನಿಮಗೆ ಅಪಘಾತವಾಗಲಿದೆ.ಅದರಿಂದ ತಪ್ಪಿಸಿಕೊಳ್ಳಬೇಕಾದರೆ ಕಷ್ಟದಲ್ಲಿರುವ ವ್ಯಕ್ತಿಗೆ ನೀವು ಹಣ ಕೊಡಬೇಕು ಅಥವಾ ಪೂಜೆ ಮಾಡಿಸಬೇಕು. ಇಲ್ಲವಾದರೆ ನಿಮ್ಮ ಪ್ರಾಣಕ್ಕೆ ಕುತ್ತು ಬರುತ್ತದೆ ಎಂದು ಹೆದರಿಸಿದ್ದಾರೆ. ಇದರಿಂದ ಭಯಗೊಂಡು ಅಪ್ಪಾಜಿ ತಿಳಿಸಿದಂತೆ, ಆರೋಪಿ ಸಂದೇಶ್ ನೀಡಿದ ಬ್ಯಾಂಕ್ ಖಾತೆಗೆ 2018ರಲ್ಲಿ ಹಣ ಜಮಾ ಮಾಡಿದ್ದೇನೆ.

2018ರಲ್ಲಿ ಮತ್ತೆ ಕರೆ ಮಾಡಿ, ನಿಮ್ಮ ಕುಟುಂಬಕ್ಕೆ ಅಪಾಯವಿದೆ, ಹಣ ಕೊಟ್ಟರೆ ಸಂದೇಶ್ ಮತ್ತು ರೂಪಶ್ರೀ ಕುಮಾರ್ ಕಡೆಯಿಂದ ಪೂಜೆ, ದಾನ, ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಿಸಿ, ಕಷ್ಟ ಪರಿಹಾರ ಮಾಡಿಸುತ್ತೇನೆ. ಇಲ್ಲವಾದರೆ ನಿಮ್ಮ ಪ್ರಾಣಕ್ಕೆ ಕುತ್ತು ಬರುತ್ತದೆ. ನಾನು ಒಬ್ಬ ದೇವಮಾನವ ಎಂದು ಹೇಳಿ ನನ್ನನ್ನು ಅಪ್ಪಾಜಿ ನಂಬಿಸಿದರು.

ಅಲ್ಲದೆ, ನೀವು ಜರ್ಮನಿ ದೇಶಕ್ಕೆ ಹೋಗುತ್ತೀರಾ ಎಂದು 2018ರಲ್ಲಿ ಭವಿಷ್ಯ ನುಡಿದರು. ಕಾಕತಾಳೀಯ ಎಂಬಂತೆ ನಮ್ಮ ಪತ್ನಿ ಮೊದಲು ಫೆಬ್ರವರಿ 2019ರಲ್ಲಿ ಜರ್ಮನಿಗೆ ಹೋದರು. ನಂತರ ಇದೇ ರೀತಿ ನನಗೂ ಸಹ ಅಪ್ಪಾಜಿ ಗುರುಗಳು ಭವಿಷ್ಯ ನುಡಿದಿದ್ದು, ಆದರಂತೆ ನಾನು ಮತ್ತು ನನ್ನ ಮಗ ಏಪ್ರಿಲ್ 2019ರಲ್ಲಿ ಜರ್ಮನಿಗೆ ಹೋದೆವು. ಇದರಿಂದ ಅವರ ಮೇಲೆ ನಂಬಿಕೆ ಹೆಚ್ಚಾಯಿತು. ಇದೇ ರೀತಿ 2018ರಿಂದ 2023ವರೆಗೆ ನನ್ನನ್ನು ಅಪ್ಪಾಜಿ ಎಂದು ತನ್ನನ್ನು ಕರೆದುಕೊಂಡು ಸಂದೇಶನ ದೂರವಾಣಿ ಸಂಖ್ಯೆಯಿಂದ ನನ್ನನ್ನು(ಅರುಣ್​ಕುಮಾರ್) ಮಾತನಾಡಿಸಿ ನಂಬಿಸಿದ್ದಾರೆ ಎಂದು ದೂರಿನಲ್ಲಿ ಅರುಣ್‌ಕುಮಾರ್ ಉಲ್ಲೇಖಿಸಿದ್ದಾರೆ.

ರೂಪಶ್ರೀ ನನಗೆ ಕರೆ ಮತ್ತು ಮೆಸೇಜ್ ಮಾಡಿ, ಈ ಅಪ್ಪಾಜಿ ಅಥವಾ ಬೇರೆ ದೇವರು ಹೇಳಿದ ಹಾಗೆ ಮಾಡದೇ ಇದ್ದರೆ ಕೋಪಗೊಂಡು ನಿಮ್ಮ ಕುಟುಂಬಕ್ಕೆ ತೊಂದರೆ ಉಂಟಾಗಬಹುದೆಂದು ಹೆದರಿಸುತ್ತಿದ್ದಳು.

ಹಲವು ದೇವರುಗಳು ಸಂದೇಶ ಮೈಮೇಲೆ ಬರುವುದಾಗಿ ತಿಳಿಸಿದ ರೂಪಶ್ರೀ, ಈ ಬಗ್ಗೆ ವಿಡಿಯೋಗಳನ್ನು ನಮಗೆ ವಾಟ್ಸಪ್ ​ನಲ್ಲಿ ಕಳುಹಿಸಿ, ವಿಡಿಯೋ ಹಾಗೂ ಅಡಿಯೋ ಕರೆ ಮೂಲಕ ನಮ್ಮನ್ನು ನಂಬಿಸಿ, ಮಗ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಮತ್ತು ಆರೋಗ್ಯದಿಂದಿರಲು ಪೂಜೆ, ದಾನ ಧರ್ಮಕ್ಕೆ ಹಣ ನೀಡಬೇಕೆಂದು ತಿಳಿಸಿದ್ದಾಳೆ. ಇಲ್ಲವಾದರೆ, ನಿಮ್ಮ ಪ್ರಾಣಕ್ಕೆ ದೇವರುಗಳು ತೊಂದರೆ ಕೊಡುತ್ತಾರೆಂದು ಹೆದರಿಸಿ ಆರೋಪಿಗಳು ಹಣ ಪಡೆದಿದ್ದಾರೆ ಎಂದು ದೂರಿದ್ದಾರೆ.

ಒಟ್ಟಾರೆ, 01/11/2018ರಿಂದ 12/02/2023ರ ವರೆಗೆ ನಾನು ಮತ್ತು ನನ್ನ ಪತ್ನಿ ಹಂತ-ಹಂತವಾಗಿ 2,19,35,872 ರೂ.ಗಳನ್ನು ಸಂದೇಶನ 4 ಬ್ಯಾಂಕ್ ಖಾತೆಗೆ ಹಾಕಿದ್ದೇವೆ. ಅಲ್ಲದೆ, ಧಾರ್ಮಿಕ ಕಾರ್ಯಕ್ಕೆ ಒಟ್ಟು 202 ಗ್ರಾಂ ಚಿನ್ನದ ಒಡವೆಗಳನ್ನು ರೂಪಶ್ರೀ ಮತ್ತು ಸಂದೇಶ್​ ಪಡೆದುಕೊಂಡಿದ್ದಾರೆ. ಬಳಿಕ ಅಪ್ಪಾಜಿಯನ್ನು ಒಂದು ಬಾರಿಯಾದರೂ ಭೇಟಿ ಮಾಡಬೇಕೆಂದು ಒತ್ತಾಯ ಮಾಡಿದಾಗ, ಅವರು 2024ರ ಫೆಬ್ರವರಿಯಲ್ಲೇ ಮೃತಪಟ್ಟಿದ್ದಾರೆ ಈ ಹಿಂದೆ ಆಗಾಗ್ಗೆ ನನ್ನ ಮೇಲೆ ಬಂದು ಅವರು ನಿಮ್ಮೊಂದಿಗೆ ಮಾತನಾಡುತ್ತಿದ್ದರು. ಈಗ ಅವರು ಮೃತಪಟ್ಟಿದ್ದರಿಂದ ನನಗೂ ಭೇಟಿ ಆಗಿಲ್ಲ, ನನ್ನ ಮೈಮೇಲೆಯೂ ಬಂದಿಲ್ಲ. ನೀವು ಭೇಟಿಯಾಗಲು ಸಾಧ್ಯವಿಲ್ಲ ಎಂದು ಆರೋಪಿಗಳು ತಿಳಿಸಿದ್ದಾರೆ. ಇದರಿಂದ ನಮಗೆ ವಂಚನೆ ಮಾಡಿರುವುದು ಗೊತ್ತಾಯಿತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ತಾವೇ ಅಪ್ಪಾಜಿ ಹಾಗೂ ಇನ್ನಿತರ ದೇವರುಗಳ ಹೆಸರಿನಲ್ಲಿ ಫೋನ್ ಮಾಡಿ ಬ್ಯಾಕ್‌ಮೇಲ್ ಮಾಡಿ ಹಣ ಪಡೆದುಕೊಂಡಿರುತ್ತೇವೆ ಎಂದು ಸಂದೇಶ್​ ಮತ್ತು ರೂಪಶ್ರೀ ಒಪ್ಪಿಕೊಂಡರು. ನಂತರ ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಸ್ವಲ್ಪ ಮಾತ್ರ ವಾಪಸ್ ಕೊಟ್ಟಿದ್ದು, ಉಳಿದ 2,19,35,872 ರೂ. ಕೊಡುವಂತೆ ಕೇಳಿದರೆ, ಇಂದು ಕೊಡುತ್ತೇವೆ, ನಾಳೆ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Related Posts

Leave a Reply

Your email address will not be published. Required fields are marked *