ಛತ್ತೀಸ್‌ಗಢ-ಆಂಧ್ರಪ್ರದೇಶ ಗಡಿ ಪ್ರದೇಶದ ಾಲ್ಲೂರಿ ಸೀತಾರಾಮರಾಜ ಜಿಲ್ಲೆಯ ಮಾರೇಡುಮಿಲ್ಲಿ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಆರು ನಕ್ಸಲರು ಹತರಾಗಿದ್ದಾರೆ ಎಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತರಾದವರಲ್ಲಿ ಭಾರತದ ಕುಖ್ಯಾತ ಮತ್ತು ಪೊಲೀಸ್ ಗೆ ಬೇಕಾಗಿದ್ದ ನಕ್ಸಲ್ ಕಮಾಂಡರ್ ಮದ್ವಿ ಹಿದ್ಮಾ ಕೂಡ ಸೇರಿದ್ದಾನೆಂದು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಹಿದ್ಮಾ ಛತ್ತೀಸ್‌ಗಢದ ಬಸ್ತಾರ್ ಡಿವಿಷನ್‌ನಲ್ಲಿ ಪಿಎಲ್‌ಜಿಎ ಬೆಟಾಲಿಯನ್ ನಂ.1ರ ಮುಖ್ಯಸ್ಥನಾಗಿದ್ದ. 2017ರ ಜೀತ್‌ಪುರಿ ದಾಳಿ ಸೇರಿದಂತೆ ಹಲವು ದೊಡ್ಡ ದಾಳಿಗಳಿಗೆ ಹಿದ್ಮಾ ಮಾಸ್ಟರ್‌ಮೈಂಡ್ ಎಂದು ಪೊಲೀಸರು ಆತನ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಿದ್ದರು. ಆತನ ಪತ್ನಿ ಮದಕಂ ರಾಜೆ ಕೂಡ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾಳೆ ಎನ್ನಲಾಗಿದೆ.
ಗುಂಡಿನ ಚಕಮಕಿ ಆಂಧ್ರದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮಾರೇಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಗ್ರೇಹೌಂಡ್ಸ್, ಡಿಆರ್‌ಜಿ ಮತ್ತು ಛತ್ತೀಸ್‌ಗಢ ಪೊಲೀಸರ ಸಂಯುಕ್ತ ತಂಡ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡಿತ್ತು. ಹಿದ್ಮಾ ಸೇರಿದಂತೆ ಹಲವು ಉನ್ನತ ಮಾವೋವಾದಿ ನಾಯಕರು ಈ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದು ಭದ್ರತಾ ಪಡೆಗಳು ದಾಳಿ ನಡೆಸಿದ್ದವು. ಸ್ಥಳದಿಂದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾವೋವಾದಿ ಸಾಹಿತ್ಯ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರಿದೆ.


