Tuesday, November 18, 2025
Menu

ಬಿಡದಿಯಲ್ಲಿ ನೂತನ ಐಟಿ ನಗರ ಸ್ಥಾಪನೆ:  ಡಿಕೆ ಶಿವಕುಮಾರ್

“ಬೆಂಗಳೂರು ದಕ್ಷಿಣದ ಬಿಡದಿಯಲ್ಲಿ ನೂತನ ಐಟಿ ನಗರ ನಿರ್ಮಾಣಕ್ಕೆ ಆಲೋಚಿಸಲಾಗಿದೆ. ಬೆಂಗಳೂರಿನಲ್ಲಿ ಬಿಲಿಯನ್ ಡಾಲರ್ ಗಟ್ಟಲೆ ಬಂಡವಾಳ ಹೂಡಿಕೆಗೆ ನಾನಾ ದೇಶದ ನಾಯಕರುಗಳು ಮುಂದೆ ಬಂದಿದ್ದಾರೆ” ಎಂದು ಡಿಸಿಎಂ ಡಿಕೆ‌ ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದರು‌. ಬೆಂಗಳೂರಿನಲ್ಲಿ ಟೆಕ್ ಸಮ್ಮಿಟ್ ನಡೆಯುತ್ತಿರುವ ಬಗ್ಗೆ ಕೇಳಿದಾಗ “ಜಗತ್ತಿನ ನಾನಾ ದೇಶದ ನಾಯಕರುಗಳು ಪ್ರತಿದಿನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ‌. ಅನೇಕರು ಬೆಂಗಳೂರಿನಲ್ಲಿ ಉದ್ದಿಮೆ ಆರಂಭಕ್ಕೆ ಉತ್ಸುಕರಾಗಿದ್ದಾರೆ. ನಾವು ಎಷ್ಟು ಸಾಧ್ಯವೋ ಅಷ್ಟು ಅವರೆಲ್ಲರ ಬೆಂಬಲಕ್ಕೆ ನಿಂತಿದ್ದೇವೆ. 60 ದೇಶಗಳ ಪ್ರತಿನಿಧಿಗಳು, ದೇಶದ ಎಲ್ಲಾ ರಾಜ್ಯಗಳ ಪ್ರಮುಖರು ಸುಮಾರು 50 ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. 1,500 ದೊಡ್ದ ಕಂಪೆನಿಗಳು ಭಾಗವಹಿಸುತ್ತಿವೆ. ಇವರುಗಳು ಉದ್ಯೋಗ ನೀಡಬೇಕು, ಸಂಪಾದನೆ ಮಾಡಬೇಕು. ಅದಕ್ಕೆ ನಮ್ಮ ಪ್ರೋತ್ಸಾಹ” ಎಂದರು.

“ಪ್ರೋತ್ಸಾಹ ನೀಡಿದರೆ ಇಲ್ಲಿನ ಪ್ರತಿಭೆಗಳು, ಹೊಸ ಆವಿಷ್ಕಾರ, ತಂತ್ರಜ್ಞಾನ, ಸ್ಟಾರ್ಟ್ ಅಪ್ ಗಳು ಕರ್ನಾಟಕವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲಿವೆ. ನೀವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು ಎಂದು ನಮ್ಮ ಮುಂದಿನ ಪೀಳಿಗೆಗೆ ನಾನು ಸದಾ ಹೇಳುತ್ತಿರುತ್ತೇನೆ. ಹೊಸ ಆಲೋಚನೆಗಳು ಬಂದರೆ ಸ್ಟಾರ್ಟ್ ಅಪ್ ಮೂಲಕ ಬೆಳೆಯಲು ಸರ್ಕಾರ ಅವಕಾಶ ಕಲ್ಪಿಸಿ ನಿಮ್ಮ ಜೊತೆಗಿದೆ ಎಂದು ಹೇಳುತ್ತಿರುತ್ತೇನೆ. ನಮ್ಮನ್ನು ನಂಬಿ ಬಂದವರಿಗೆ ಉತ್ತಮ ಅವಕಾಶ ನೀಡುವುದು ನಮ್ಮ ಕೆಲಸ. ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲಾಗುವುದು” ಎಂದು ಹೇಳಿದರು.

“ಐಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಜವಾಬ್ದಾರಿ ಹೊತ್ತಿರುವ ಶರತ್ ಬಚ್ಚೇಗೌಡರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ನಾವೆಲ್ಲರೂ ಇದ್ದೇವೆ. ಬೆಂಗಳೂರಿನ ವಾತಾವರಣವೇ ಎಲ್ಲದಕ್ಕೂ ಅನುಕೂಲಕರವಾಗಿದೆ. 25 ಲಕ್ಷ ಐಟಿ ಪರಿಣಿತರು ಇಲ್ಲಿದ್ದಾರೆ. ನಮ್ಮಲ್ಲಿರುವ ಮಾನವ ಸಂಪನ್ಮೂಲಗಳು ಬೇರೆ ಎಲ್ಲೂ ಇಲ್ಲ. ಈ ಸಮ್ಮೇಳನ ಮೂಲಕ ಮೂರು ದಿನಗಳ ಕಾಲ ಭವಿಷ್ಯದ ಬಗ್ಗೆ ಚರ್ಚೆ ಮಾಡಲಾಗುವುದು.  ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಎಲ್ಲಾ ಕ್ಷೇತ್ರಗಳಿಗೆ ಅದರದೇ ಆದ ನೀತಿ ರೂಪಿಸಿ, ಪ್ರೋತ್ಸಾಹ ನೀಡುತ್ತಿದೆ.” ಎಂದರು.

ರಸ್ತೆಗಳ ದುರಸ್ತಿ ಕಾರ್ಯಕ್ಕೆ ಹಲವಾರು ಕಂಪೆನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, “ನಾವು ನಮ್ಮ ಕೆಲಸ ಮಾಡಿದ್ದೇವೆ. ಟೀಕೆ ಮಾಡಿದರೂ ಸ್ವಾಗತ, ಹೊಗಳಿದರೂ ಸ್ವಾಗತ. ಜನಸೇವೆ ಮಾಡುವುದೇ ಮೊದಲ ಆದ್ಯತೆ” ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *