ಬೆಳಗಾವಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣ ಮೃಗಗಳ ಸಾವಿಗೆ ಸಂಬಂಧಿಸಿದಂತೆ ಮೂರು ತಿಂಗಳ ಮೊದಲೇ ಎಚ್ಚರಿಕೆ ಮಾಹಿತಿ ಲಭಿಸಿತ್ತು ಎಂಬ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗಮಾಹಿತಿ ಸಂಸ್ಥೆಯಿಂದ ಮೂರು ತಿಂಗಳ ಮೊದಲೇ ಸಾಂಕ್ರಾಮಿಕ ಕಾಯಿಲೆ ಹರಡುವ ಬಗ್ಗೆ ಎಚ್ಚರಿಕೆ ಸಂದೇಶ ಪಶು ಸಂಗೋಪನೆ ಇಲಾಖೆಗೆ ಬಂದಿತ್ತು. ಪಶುಸಂಗೋಪನೆ ಇಲಾಖೆಯಿಂದಲೇ ಅರಣ್ಯ ಇಲಾಖೆ, ಮೃಗಾಲಯಗಳಿಗೆ ಮಾಹಿತಿ ರವಾನೆಯಾಗಿತ್ತು.
ಬೆಂಗಳೂರಿನ ಯಲಹಂಹದಲ್ಲಿರುವ ಎನ್.ಐ.ವಿ.ಇ.ಡಿ ಸಂಸ್ಥೆ ರಾಜ್ಯ ಪಶುಸಂಗೋಪನೆ ಇಲಾಖೆಯ ನಿರ್ದೇಶಕರಿಗೆ ಮಾಹಿತಿ ನೀಡಿದ್ದು, ಅಲ್ಲಿಂದ ಅರಣ್ಯ ಇಲಾಖೆ, ಮೃಗಾಲಯಗಳಿಗೆ ಎಚ್ಚರಿಕೆ ನೀಡಲಾಗಿದೆ. ಹಸು, ಎಮ್ಮೆ ಸಾಕುವ ರೈತರಿಗೂ ಈ ಸಂದೇಶ ರವಾನಿಸುವಂತೆ ಸೂಚಿಸಲಾಗಿತ್ತು.
ಬೆಳಗಾವಿ ಭಾಗದಲ್ಲಿ ಹಿಮೋರೆಜಿಕ್ ಸೆಪ್ಟಿಸಿಮೀಯಾ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿತ್ತು. ಎಚ್ಎಸ್ (ಹಿಮೋರೆಜಿಕ್ ಸೆಪ್ಟಿಸಿಮೀಯಾ) ಬ್ಯಾಕ್ಟೀರಿಯಾದಿಂದ ಕೃಷ್ಣ ಮೃಗಗಳ ಸರಣಿ ಸಾವು ಸಂಭವಿಸಿರುವುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಪತ್ತೆಯಾಗಿದೆ.
ರಾಷ್ಟ್ರೀಯ ಸಂಸ್ಥೆ ಸಾಂಕ್ರಾಮಿಕ ರೋಗ ಬರುವ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದರೇ ಪಶುಸಂಗೋಪನೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎಂಬ ಪ್ರಶ್ನೆ ಎದುರಾಗಿದೆ. ಕೃಷ್ಣ ಮೃಗಗಳ ಸರಣಿ ಸಾವಿನ ಹೊಣೆ ಎರಡೂ ಇಲಾಖೆ ಅಧಿಕಾರಿಗಳು ಹೊತ್ತುಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆ ವರದಿ ಇಂದು ಬರಲಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬರುವ ಸಾಧ್ಯತೆ ಇದೆ. ಅರಣ್ಯ ಇಲಾಖೆಗೂ ವೈದ್ಯರ ತಂಡ ವರದಿ ನೀಡಲಿದೆ. ಏಳು ಕೃಷ್ಣ ಮೃಗಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆಯಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇಂದು ಮತ್ತೆ ಬೆಂಗಳೂರಿನಿಂದ ವೈದ್ಯರ ತಂಡ ಆಗಮಿಸಿದೆ. ಮೃಗಾಲಯ ಸದಸ್ಯ ಕಾರ್ಯದರ್ಶಿ ಸುನಿಲ್ ಪನ್ವರ್ ಹಾಗೂ ವೈದ್ಯರು ಭೇಟಿಯಾಗಿದ್ದಾರೆ. ಈಗಾಗಲೇ ಮೃಗಾಲಯಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಔಷಧಿ ಸಿಂಪಡಣೆ ಮಾಡಲಾಗಿದೆ.


