ಕಲಬುರಗಿಯಲ್ಲಿ ಇಂದಿನಿಂದ ನಾಲ್ಕು ದಿನ ತೀವ್ರ ಶೀತದ ಗಾಳಿ ಬೀಸಲಿದೆ. ಸಾಮಾನ್ಯಕ್ಕಿಂತ 04- 06 ಡಿಗ್ರಿ ಕಡಿಮೆ ತಾಪಮಾನ ದಾಖಲಾಗುವುದು ಎಂದು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಮಾಹಿತಿ ನೀಡಿದ್ದಾರೆ.
ಆರೋಗ್ಯದ ಬಗ್ಗೆ ನಿಗಾ ವಹಿಸಿ ಈ ಪರಿಸ್ಥಿತಿಯಲ್ಲಿ ಜನರು ಅನಗತ್ಯವಾಗಿ ಹೊರಗೆ ಬರದಂತೆ, ಪ್ರವಾಸ ಮಾಡದಂತೆ ಅವರು ಮನವಿ ಮಾಡಿದ್ದಾರೆ. ಚಳಿ ಹಾಗೂ ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಹಿಸಬೇಕು, ವೃದ್ಧರು ಹಾಗೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಂಡು ನೋಡಿಕೊಳ್ಳಬೇಕು, ಜಾನುವಾರುಗಳನ್ನು ಶೆಡ್ ಒಳಗೆ ಕಟ್ಟಿಹಾಕಬೇಕು ಎಂದು ಸೂಚನೆ ನೀಡಿದ್ದಾರೆ.
ಶೀತದಿಂದ ರಕ್ಷಿಸಲು ಬೆಚ್ಚನೆಯ ಬಟ್ಟೆಗಳನ್ನು ಧರಿಸಬೇಕು. ಕೈಗವಸುಗಳನ್ನು ಹಾಕಿಕೊಳ್ಳಬೇಕು, ನಿಯಮಿತವಾಗಿ ಬಿಸಿ ಪಾನೀಯಗಳನ್ನು ಕುಡಿಯಬೇಕು. ದೇಹದ ಉಷ್ಣತೆಯನ್ನು ಕಡಿಮೆಗೊಳಿಸುವ ಮದ್ಯ ಸೇವಿಸಬಾರದು. ಹಿಮಪಾತವಾದ ದೇಹದ ಭಾಗವನ್ನು ಮಸಾಜ್ ಮಾಡಬಾರದು. ಪ್ರಾಣಿಗಳು ಆರೋಗ್ಯವಾಗಿರಲು ಮೇವಿನ ಸಾಂದ್ರತೆಯಲ್ಲಿ ಪ್ರೋಟೀನ್ ಮಟ್ಟ ಮತ್ತು ಖನಿಜಗಳನ್ನು ಹೆಚ್ಚಿಸಬೇಕು. ಪ್ರಾಣಿಗಳಿಗೆ ದೈನಂದಿನ ನೀಡುವ ಮೇವು, ಬೇಳೆ ಕಾಳಿನ ಜೊತೆಗೆ ಉಪ್ಪಿನೊಂದಿಗೆ ಖನಿಜ ಮಿಶ್ರಣ ಪೂರೈಸಬೇಕು. ಇದಲ್ಲದೆ ಗೋಧಿ ಧಾನ್ಯ, ಬೆಲ್ಲ ನೀಡಬಹುದು.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಸಾಧಾರಣ ಮಳೆಯಾಗಲಿದೆ. ಕಲ್ಯಾಣ ಕರ್ನಾಟಕದಲ್ಲಿ ವಿಪರೀತ ಚಳಿಯ ವಾತಾವರಣ ಇರಲಿದ್ದು, ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.


