ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಕಬ್ಬು ಬೆಲೆ ನಿಗದಿ, 2100 ಕೋಟಿ ಪ್ರವಾಹ ಪರಿಹಾರ ಹಾಗೂ ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ತೀರುವಳಿಗಳನ್ನು ನೀಡಲು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪ್ರಮುಖ ನೀರಾವರಿ ಯೋಜನೆಗಳು
ರಾಜ್ಯದ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರದಿಂದ ಬಾಕಿ ರುವ ತೀರುವಳಿಗಳನ್ನು ದೊರಕಿಸಲು ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು.
ಪ್ರಧಾನಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಮತೋಲನ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ ತೀರುವಳಿಗಳನ್ನು ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶಿಸಬೇಕು. ಕಳೆದ ಒಂದು ದಶಕದಿಂದ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ -2 ರಲ್ಲಿ ಬಾಕಿ ಇರುವ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲು ಹಾಗೂ ಕೇಂದ್ರ 2023-24 ರ ಬಜೆಟ್ನಲ್ಲಿ ಘೋಷಿಸಿರುವಂತೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಯ್ಯ ಒತ್ತಾಯಿಸಿದ್ದಾರೆ.
ಕಳಸಾ- ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಹುಬ್ಬಳಿ- ಧಾರವಾಡ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಅರಣ್ಯ ಮತ್ತು ವನ್ಯಜೀವಿ ಪರಿಸರ ಇಲಾಖೆ ವತಿಯಿಂದ ನೀಡಬೇಕಾದ ತೀರುವಳಿಗಳನ್ನು ನೀಡಲು ಆಗ್ರಹಿಸಿದ್ದಾರೆ.
ಪ್ರವಾಹ ಹಾನಿಗೆ 2136 ಕೋಟಿ ರೂ.ಗಳ ಪರಿಹಾರಕ್ಕೆ ಮನವಿ
ವರ್ಷ ಉಂಟಾದ ಭಾರಿ ಮಳೆಯಿಂದಾಗಿ ರಾಜ್ಯದ 14.5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, 19 ಲಕ್ಷ ರೈತರಿಗೆ ನಷ್ಟ ಉಂಟಾಗಿದೆ. ಇದಲ್ಲದೇ ಸಾವಿರಾರ ಮನೆಗಳು, ರಸ್ತೆ ಹಾಗೂ ಶಾಲೆ ಗಳು ಹಾನಿಗೀಡಾಗಿದ್ದು ಎನ್.ಡಿ.ಆರ್ ಎಫ್ ವತಿಯಿಂದ ಪರಿಹಾರವನ್ನು ಕೋರಿ ಎರಡು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಇನ್ಪುಟ್ ಸಬ್ಸಿಡಿಯಲ್ಲಿನ ಕೊರತೆಗಳನ್ನು ನೀಗಿಸಲು ‘ರಕ್ಷಣೆ ಮತ್ತು ಪರಿಹಾರ’ ದಡಿ 614.9 ಕೋಟಿಗಳು ಹಾಗೂ ದಡಿ ಹಾನಿಗೊಳಗಾದ ಸಾರ್ವಜನಿಕ ಮೂಲಸೌಕರ್ಯಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ 1521.67 ಕೋಟಿಗಳ ಪರಿಹಾರ ನೀಡಲು ಮನವಿ ಪತ್ರದಲ್ಲಿ ಕೋರಲಾಗಿದೆ.
ಜಲ ಜೀವನ ಮಿಷನ್
ಕರ್ನಾಟಕ ರಾಜ್ಯದಲ್ಲಿ ಜಲ ಜೀವನ ಮಿಷನ್ (JJM) ಯೋಜನೆಯಡಿ ರೆ 2025-26ರ ಅಂತ್ಯದವರೆಗೆ ಕರ್ನಾಟಕಕ್ಕೆ ಕೊಡಬೇಕಾದ ಪಾಲಿನಲ್ಲಿ ರೂ.13,004.63 ಕೋಟಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. 2024-25ರ ಹಣಕಾಸು ವರ್ಷದಲ್ಲಿ ಹಂಚಿಕೆಯಾಗಬೇಕಿದ್ದ 3,804.41 ಕೋಟಿ ರೂ. ಪೈಕಿ ಕೇವಲ 570.66 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವು ಸ್ವೀಕರಿಸಲಾಗಿದ್ದರೂ ರಾಜ್ಯ ಸರ್ಕಾರ ತಾನೇ ಮುಂಗಡವಾಗಿ ರೂ.7,045.64 ಕೋಟಿ ಬಿಡುಗಡೆ ಮಾಡುವ ಮೂಲಕ, ಯೋಜನೆಯ ಯಶಸ್ಸಿಗೆ ಅಗತ್ಯ 7,602.99 ಕೋಟಿ ರೂ. ಮೊತ್ತವನ್ನು ಒದಗಿಸಲಾಗಿದೆ.
2025-26ನೇ ಸಾಲಿನಲ್ಲಿ ಕೇಂದ್ರದಿಂದ ಯೋಜನೆಯಡಿ ಹಣ ಬಿಡುಗಡೆಯಾಗಿಲ್ಲ. ಆದರೂ ರಾಜ್ಯಮುಂಗಡವಾಗಿ ರೂ.1,500 ಕೋಟಿ ಬಿಡುಗಡೆ ಮಾಡಿದೆ. ಪ್ರಸ್ತುತ 1,700 ಕೋಟಿ ರೂ. ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇವೆ ಮತ್ತು 2,600 ಕೋಟಿ ರೂ. ಮೊತ್ತದ ಬಿಲ್ಲುಗಳು ಸಲ್ಲಿಕೆಯಾಗಬೇಕಿದೆ. ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಅತ್ಯಂತ ಮುಖ್ಯವಾದ ಕೇಂದ್ರದ ಯೋಜನೆಯಾಗಿದೆ. ಇದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಸಹಾಯ ಅನಿವಾರ್ಯ. ಆದ್ದರಿಂದ, ಜಲ ಜೀವನ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಬಾಕಿ ಇರುವ ಕೇಂದ್ರದ ಪಾಲಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕಂದು ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.
ಕಬ್ಬು ಬೆಳೆ ದರ ನಿಗದಿಗೆ ಸುಸ್ಥಿರ ಪರಿಹಾರ
ಕಬ್ಬು ಬೆಳೆಗಾರರಿಗೆ ತುರ್ತು ಆರ್ಥಿಕ ನೆರವು ನೀಡಲು ಮತ್ತು ಹೆಚ್ಚಿನ ನಿವ್ವಳ ದರವನ್ನು ಖಚಿತಪಡಿಸಲು ಸರ್ಕಾರ ಆದೇಶವನ್ನು ಹೊರಡಿಸಿದ್ದು, ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (MSP) ಪ್ರತಿ ಕೆ.ಜಿಗೆ ₹31 ರಲ್ಲಿ ಸ್ಥಗಿತಗೊಂಡಿರುವುದೇ ಸಕ್ಕರೆ ಕಾರ್ಖಾನೆಗಳು ಈ ನಿಗದಿತ ಬೆಲೆಯನ್ನು ರೈತರಿಗೆ ನೀಡಲು ಸಾಧ್ಯವಾಗದಿರುವ ಕಾರಣವನ್ನು ಪತ್ರದಲ್ಲಿ ವಿವರಿಸಿ, ಈ ಸಂಕಷ್ಟಕ್ಕೆ ಶಾಶ್ವತ ಮತ್ತು ಸಮರ್ಥ ಪರಿಹಾರ ಒದಗಿಸುವ ದಿಸೆಯಲ್ಲಿ, ಸಕ್ಕರೆಯ ಎಂಎಸ್‌ಪಿಯ ತಕ್ಷಣದ ಪರಿಷ್ಕರಣೆ(ಪ್ರಸ್ತುತ ಪ್ರತಿ ಕೆ.ಜಿ.ಗೆ 31 ರೂ.ಗಳು), ಕರ್ನಾಟಕದ ಸಕ್ಕರೆ ಆಧಾರಿತ ಡಿಸ್ಟಿಲರಿಗಳಿಂದ ಎಥನಾಲ್ ಖರೀದಿ ಮಂಜೂರಾತಿಯ ಹೆಚ್ಚಳ, ರಾಜ್ಯಗಳಿಗೆ ಕಬ್ಬಿನ ಬೆಲೆಯನ್ನು ನಿಗದಿಪಡಿಸಲು ಅಥವಾ ಅನುಮೋದಿಸಲು ಅಧಿಕಾರ ನೀಡುವಂತಹ ಕೇಂದ್ರ ಅಧಿಸೂಚನೆಯ ಹೊರಡಿಸುವುದೂ ಸೇರಿದಂತೆ ಮನವಿ ಪತ್ರದಲ್ಲಿ ಮೂರು ಬೇಡಿಕೆಗಳನ್ನು ಸಲ್ಲಿಸಿದ್ದಾರೆ
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ
ಕಲ್ಯಾಣ ಕರ್ನಾಟಕದ ಭಾಗವಾದ ರಾಯಚೂರು ಜಿಲ್ಲೆಯು ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ತಲಾ ಆದಾಯದ ಮಟ್ಟದಲ್ಲಿ ಆರಂಭಿಕ ಹಂತದಲ್ಲಿದೆ. ದಲಿತರು ಹಾಗೂ ಹಿಂದುಳಿದ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಜನರಿಗೆ ಗುಣಮಟ್ಟದ ರೆಫರೆಲ್ ವೈದ್ಯಕೀಯ ಕೇಂದ್ರದ ಅಗತ್ಯತೆಯನ್ನು ಪೂರೈಸಲು ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆಯನ್ನು ನೀಡುವಂತೆ ಮನವಿಪತ್ರದಲ್ಲಿ ಕೋರಲಾಗಿದೆ.
ಕರ್ನಾಟಕ ಸರ್ಕಾರವು ರಾಯಚೂರಿನಲ್ಲಿ AIIMS ಸ್ಥಾಪನೆಗೆ ಅನುಮೋದನೆ ಕೋರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವಿವರವಾದ ಯೋಜನಾ ವರದಿಯನ್ನು ಈಗಾಗಲೇ ಸಲ್ಲಿಸಿದೆ. ಯೋಜನೆಗೆ ಅವಶ್ಯವಾದ ಭೂಮಿಯ ಲಭ್ಯತೆ, ಸಂಪರ್ಕ ವ್ಯವಸ್ಥೆ ಮತ್ತು ಸ್ಥಳೀಯ ಆಡಳಿತದ ಬೆಂಬಲ ಸೇರಿದಂತೆ AIIMS ನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.


