ಮೈಸೂರು: ಗಡಿ ಜಿಲ್ಲೆಯಾದ ಚಾಮರಾಜನಗರ ಮತ್ತು ಮೈಸೂರು ಭಾಗದ ಅರಣ್ಯ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಹುಲಿಗಳು ಸಂಚರಿಸುತ್ತಿವೆ. ಇದರಲ್ಲಿ 5 ಸೆರೆ ಹಿಡಿಯಲಾಗಿದೆ.
ಗಡಿ ಭಾಗದಲ್ಲಿ ಒಂದೆರಡು ಹುಲಿಗಳಲ್ಲ, ಸಂಚರಿಸುತ್ತಿರುವ 20ಕ್ಕೂ ಹೆಚ್ಚು ಹುಲಿಗಳು. ಈ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳ ಹಲವು ಗ್ರಾಮಗಳು ಹುಲಿ ದಾಳಿಯಿಂದ ತತ್ತರಿಸಿವೆ. ಇತ್ತೀಚೆಗಷ್ಟೇ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹುಲಿ ಪತ್ತೆಯಾಗಿತ್ತು.
ಜನರ ನಿದ್ದೆಗೆಡಿಸುತ್ತಿರುವ ಹುಲಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ದಾಳಿಗೆ ಕಡಿವಾಣ ಹಾಕಲು ಸುಂದರ್ ಬನ್ಸ್ ತಂತ್ರಗಾರಿಕೆ ಅನುಸರಿಸಲು ನಿರ್ಧರಿಸಿದೆ.
ಸಾಮಾನ್ಯವಾಗಿ ಹುಲಿಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ. ಮನುಷ್ಯನ ಮೇಲೆ ದಾಳಿ ನಡೆಸುವುದಿಲ್ಲ. ಒಂದು ವೇಳೆ ಆತ ಕುಳಿತುಕೊಂಡಿದ್ದರೆ ಅಥವಾ ಬಗ್ಗಿರುವ ಸ್ಥಿತಿಯಲ್ಲಿ ಕಂಡು ಬಂದರೆ ಹಿಂಬಂದಿಯಿಂದ ಅವು ದಾಳಿ ಮಾಡುವ ಸಾಧ್ಯತೆ ಇರುತ್ತವೆ.
ಹುಲಿ ದಾಳಿ ತಪ್ಪಿಸುವ ನಿಟ್ಟಿನಲ್ಲಿ ಮುಖವಾಡಗಳನ್ನ ನೀಡಲಾಗಿದೆ. ಬರೋಬ್ಬರಿ 10 ಸಾವಿರ ಮಾಸ್ಕ್‌ನ್ನು ರೈತರಿಗೆ ಅರಣ್ಯ ಇಲಾಖೆ ವಿತರಿಸಿದೆ. ಪಶ್ಚಿಮ ಬಂಗಾಳದ ಸುಂದರ್‌ಬನ್ಸ್ ಪ್ರದೇಶದ ಸಮುದಾಯದಲ್ಲಿ ಹುಲಿದಾಳಿಯಿಂದ ತಪ್ಪಿಸಿಕೊಳ್ಳಲು ಮುಖವಾಡ ಧರಿಸುವ ಈ ಕ್ರಮ ಚಾಲ್ತಿಯಲ್ಲಿದ್ದು, ಇದರಿಂದಲೇ ರಾಜ್ಯದ ಅರಣ್ಯ ಇಲಾಖೆಯೂ ಪ್ರೇರಿತವಾಗಿದೆ ಎನ್ನಲಾಗಿದೆ.
ನಿರಂತರ ಕೋಂಬಿಂಗ್ ಹಾಗೂ ಸುಮಾರು 10 ಹುಲಿಗಳನ್ನು (ಮರಿಗಳು ಸೇರಿ) ಹಿಡಿದಿದ್ದರೂ, ಕಾಡಂಚಿನ ಗ್ರಾಮಸ್ಥರು ಹುಲಿಗಳ ಸಂಚಾರವನ್ನು ಕಂಡಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಹೀಗಾಗಿ ತಮ್ಮ ಹೊಲಗಳಿಗೆ ಕೃಷಿ ಕಾರ್ಯ ಅಥವಾ ಪಶುಗಳನ್ನು ಮೇಯಿಸಲು ಹೋಗಲೂ ಜನ ಭಯಪಡುತ್ತಿದ್ದಾರೆ. ಹುಲಿಗಳು ಸಾಮಾನ್ಯವಾಗಿ ಹಿಂಬದಿಯಿಂದ ದಾಳಿ ಮಾಡುವ ಸ್ವಭಾವ ಹೊಂದಿರುವ ಕಾರಣ, ಸುಂದರ್‌ಬನ್ಸ್ ವಿಧಾನವನ್ನು ಇಲ್ಲಿಯೂ ಅಳವಡಿಸುವ ಯತ್ನ ನಡೆದಿದೆ.
ಅರಣ್ಯ ಸಿಬ್ಬಂದಿ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ, ಮುಖವಾಡಗಳನ್ನು ಹಂಚುತ್ತಿದ್ದಾರೆ. ಕೃಷಿ ಮತ್ತು ಪಶುಸಂಗೋಪನೆ ಮಾಡಲು ತೆರಳುವ ರೈತರಿಗೆ ಮುಖವಾಡ ಯಾಕೆ ಧರಿಸಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ಪ್ರಕಟಣೆಗಳನ್ನೂ ಮಾಡಲಾಗುತ್ತಿದೆ. ಮುಖವಾಡಗಳ ಜೊತೆಗೆ, ಕಾಡು ಪ್ರಾಣಿಗಳ ಎದುರಿನಲ್ಲಿ ಹೇಗೆ ವರ್ತಿಸಬೇಕು? ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಮಾಹಿತಿಯನ್ನೂ ನೀಡಲಾಗುತ್ತಿದೆ.


