ಶಬರಿಮಲೆ: ಸುಪ್ರಸಿದ್ಧ ಕೇರಳದ ಶಬರಿಮಲೆಯ ಯಾತ್ರೆ ಮಲಯಾಳಂ ತಿಂಗಳ ವೃಚಿಕಂನ ಶುಭ ದಿನವಾದ ವಾರ್ಷಿಕ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆ ಕೂಡ ಪ್ರಾರಂಭವಾಗಿದೆ.
ಮೊದಲ ದಿನವೇ ಅಯ್ಯಪ್ಪನ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸಾಂಪ್ರದಾಯಿಕ ಕಪ್ಪು ಉಡುಪು ಧರಿಸಿ, ‘ಇರುಮುಡಿಕ್ಕೆಟ್ಟು’ವನ್ನು ತಲೆಯ ಮೇಲೆ ಹೊತ್ತು ರಾಜ್ಯ ಮತ್ತು ಹೊರ ರಾಜ್ಯದ ಭಕ್ತರು ದರ್ಶನಕ್ಕೆ ಆಗಮಿಸಿದ್ದಾರೆ.
ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರು. ನೂತನವಾಗಿ ನೇಮಕಗೊಂಡ ಮೇಲ್ಸಂತಿ (ಪ್ರಧಾನ ಅರ್ಚಕ) ಇ.ಡಿ ಪ್ರಸಾದ್ ನಂಬೂದಿರಿ ಅವರು ದೇಗುಲದ ದ್ವಾರಗಳನ್ನು ತೆರೆಯುತ್ತಿದ್ದಂತೆ ಭಕ್ತರು ಒಕ್ಕೋರಲಿನಿಂದ ಅಯ್ಯಪ್ಪ ಸ್ವಾಮಿಯ ಸ್ತೋತ್ರ ಪಠಿಸಿದರು.
ದರ್ಶನ ಸಮಯ ಪ್ರಕಟ
ದೇವಾಲಯದ ಗರ್ಭಗುಡಿಯನ್ನು ತಂತ್ರಿ (ಪ್ರಧಾನ ಅರ್ಚಕ) ಕಾಂತರಾರು ಮಹೇಶ್ ಮೋಹನರಾರು ಅವರ ಸಮ್ಮುಖದಲ್ಲಿ ತೆರೆಯಲಾಯಿತು. ಈ ಸಂದರ್ಭದಲ್ಲಿ ದೇವಸ್ವಂ ಮಂಡಳಿಯ ಕಾರ್ಯದರ್ಶಿ ಪಿ ಎನ್ ಗಣೇಶರನ್ ಪೊಟ್ಟಿ, ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ಒ.ಜಿ. ಬಿಜು ಮತ್ತು ಇತರರು ಉಪಸ್ಥಿತರಿದ್ದರು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪ್ರಕಟಣೆಯಲ್ಲಿ ತಿಳಿಸಿದೆ.
ಮುಂಜಾನೆಯಿಂದಲೇ ಭಕ್ತರು ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ದೇವಾಲಯ ತೆರೆದಾಗ, ದರ್ಶನ ನಾಡಪಂದಳ (ನಡಿಗೆ ಮಾರ್ಗ) ಮತ್ತು ಸೋಪಾನಂ (ಪವಿತ್ರ ಮೆಟ್ಟಿಲುಗಳು) ಉದ್ದಕ್ಕೂ ಭಕ್ತರ ಸಾಲುಗಳನ್ನು ಕಂಡಿದೆ.
ಗರ್ಭಗುಡಿ ತೆರೆದ ಬಳಿಕ ನಿರ್ಮಾಲ್ಯ ಅಭಿಷೇಕ, ಗಣಪತಿ ಹೋಮ, ನೆಯ್ಯಭಿಷೇಕ ಮುಂತಾದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ದೇಗುಲದ ದ್ವಾರ ಮುಚ್ಚಲಾಗುವುದು. ಮಧ್ಯಾಹ್ನ 3ರ ನಂತರ ಮತ್ತೆ ತೆರೆದು ರಾತ್ರಿ 11ಕ್ಕೆ ಹರಿವರಸನಂ ಗೀತೆ ಹಾಡಿದ ಬಳಿಕ ಮತ್ತೆ ಮುಚ್ಚಲಾಗುವುದು ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.


