ಕಾಂಗೋ ಗಣರಾಜ್ಯದ ಲುವಾಲಾಬಾ ಪ್ರಾಂತ್ಯದ ತಾಮ್ರ ಮತ್ತು ಕೋಬಾಲ್ಟ್ ಗಣಿ ಸೇತುವೆ ಕುಸಿದು ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯ ಬಿರುಸಾಗಿ ಮುಂದುವರಿದಿದೆ. ಈ ದುರಂತದ ಭೀಕರ ದೃಶ್ಯಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲುವಾಲಾಬಾದ ಕಲಾಂಡೊ ಗಣಿಯ ಮುಲೋಂಡೊ ಪ್ರದೇಶದಲ್ಲಿ ಗಣಿ ಕಾರ್ಮಿಕರು ಸಂಚಾರ ಮಾಡುವ ಈ ಸೇತುವೆ ಜನಸಂದಣಿಯಿಂದ ತುಂಬಿಕೊಂಡಿದ್ದ ವೇಳೆ ಕುಸಿದು ಬಿದ್ದಿದೆ. ಸ್ಥಳೀಯ ಮಾಧ್ಯಮಗಳು ಮತ್ತು ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈ ದುರಂತಕ್ಕೆ ಸೈನಿಕರ ಗುಂಡಿನ ದಾಳಿ ಕಾರಣ ಎನ್ನಲಾಗಿದೆ.
ಗಣಿ ಪ್ರದೇಶದಲ್ಲಿ ಸೇನೆಯ ಸೈನಿಕರು ಗುಂಡು ಹಾರಿಸಿದ್ದಾರೆ. ಭಯಭೀತರಾದ ಕಾರ್ಮಿಕರು ಓಡಲು ಶುರು ಮಾಡಿದ್ದು, ಹೊರಬರುವ ಮುಖ್ಯ ಮಾರ್ಗವಾಗಿದ್ದ ಸೇತುವೆಯ ಕಡೆ ಜನದಟ್ಟಣೆ ತೀವ್ರಗೊಂಡು ಸೇತುವೆ ಕುಸಿದು ಬಿದ್ದಿದೆ. ಕೆಲವರು ಸೇತುವೆಯಿಂದಲೇ ಕೆಳಗೆ ಬಿದ್ದು ಅಸು ನೀಗಿದ್ದರೆ, ಕೆಲವರು ಕುಸಿದ ಸೇತುವೆಯಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಬೃಹತ್ ಹಾಂಗ್‌ಕ್ವಿ ಸೇತುವೆ ಕುಸಿದು ಬಿದ್ದಿದೆ. ಈ ಸೇತುವೆ ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡಿತ್ತು. . ಸೇತುವೆ ಕುಸಿಯುವ ದೃಶ್ಯಗಳನ್ನು ಒಳಗೊಂಡ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸೇತುವೆಯ ಬಳಿ ಇರುವ ಪರ್ವತ ಇಳಿಜಾರುಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಭೂಪ್ರದೇಶದಲ್ಲಿ ಅಸ್ಥಿರತೆ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೇತುವೆಯ ಸಂಚಾರವನ್ನು ಒಂದು ದಿನ ಮುಂಚಿತವಾಗಿ ಸಂಪೂರ್ಣವಾಗಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಮೇರ್ಕಾಂಗ್‌ನ ಅಧಿಕಾರಿಗಳು ತಿಳಿಸಿದ್ದಾರೆ.


