Wednesday, August 06, 2025
Menu

ಸೈಬರ್‌ ವಂಚನೆ ಸಂತ್ರಸ್ತರಿಗೆ ಕಾನೂನು ನೆರವು ಹೆಸರಲ್ಲಿ ಧೋಖಾ: ಎಂಜಿನಿಯರ್‌ ಅರೆಸ್ಟ್‌

Cyber fraud

ಸೈಬರ್ ವಂಚನೆ ಸಂತ್ರಸ್ತರಿಗೆ ಆನ್‌ ಲೈನ್‌ ಮೂಲಕ ಕಾನೂನು ಸೇವೆ ಒದಗಿಸುವುದಾಗಿ ನಂಬಿಸಿ ಹಣ ದೋಚುತ್ತಿದ್ದ ಎಂಜಿನಿಯರಿಂಗ್ ಪದವೀಧರನೊಬ್ಬನನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊತ್ತನೂರು ಬಿಡಿಎಸ್ ಗಾರ್ಡನ್‌ ನಿವಾಸಿ ತುಫೈಲ್ ಅಹಮ್ಮದ್‌ ಬಂಧಿತ. ಆರೋಪಿಯಿಂದ 10 ಹಾರ್ಡ್‌ ಡಿಸ್ಕ್‌ಗಳು, 7 ನಕಲಿ ಕಂಪನಿಗಳ ಸೀಲ್‌ಗಳು, ಬಾಡಿಗೆ ಒಪ್ಪಂದ ಪತ್ರಗಳು, ಚೆಕ್‌ಬುಕ್‌, ಮೊಬೈಲ್ ಹಾಗೂ 11 ಸಿಮ್‌ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯಲ್ಲಿ ಈ ವಂಚನೆ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು, ಹೆಚ್ಚಿನ ತನಿಖೆಗೆ ಸಿಸಿಬಿ ಸೈಬರ್‌ ಕ್ರೈಂ ಠಾಣೆಗೆ ವರ್ಗಾವಣೆಯಾಯಿತು. ಸೋಲಾರ್ ಫ್ಲಾಂಟ್‌ ಅಳವಡಿಸುವುದಾಗಿ ಆಮಿಷವೊಡ್ಡಿ ₹1.5 ಕೋಟಿ ಸಂತ್ರಸ್ತರಿಗೆ ವಂಚಿಸಿದ್ದಾಗಿ ಹೇಳಲಾಗಿತ್ತು. ಆ ಹಣವನ್ನು ಮರಳಿ ಪಡೆಯಲು ಆನ್‌ಲೈನ್‌ನಲ್ಲಿ ಕಾನೂನು ನೆರವು ಹುಡುಕುತ್ತಿರುವಾಗ ಕ್ವಿಕ್‌ ಮೋಟೊ ಲೀಗಲ್‌ ಸರ್ವಿಸ್‌ ಹೆಸರಿನ ವೆಬ್‌ ಸೈಟ್ ಸಿಕ್ಕಿದೆ. ಆ ಸಂಸ್ಥೆಯನ್ನು ದೂರುದಾರರು ಸಂಪರ್ಕಿಸಿದ್ದರು. ಸಂಸ್ಥೆಯವರು ಸಂತ್ರಸ್ತರಿಂದ 13.5 ಲಕ್ಷ ರು. ವಸೂಲಿ ಮಾಡಿದ್ದರು. ಹಣ ಕಳೆದುಕೊಂಡ ಬಳಿಕ ಆ ಲೀಗಲ್ ಸರ್ವಿಸ್ ಸಂಸ್ಥೆ ಬಗ್ಗೆ ವಿಚಾರಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಸೈಬರ್ ಪೋರ್ಟಲ್‌ನಲ್ಲಿ ಅವರು ದೂರು ಸಲ್ಲಿಸಿದ್ದರು.

ತನಿಖೆಗಿಳಿದ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಕಸ್ತೂರಿನಗರದಲ್ಲಿದ್ದ ಕಂಪನಿಯ ಕಾಲ್ ಸೆಂಟರ್ ಪತ್ತೆ ಹಚ್ಚಿದ್ದಾರೆ. ತಮಿಳುನಾಡು ಮೂಲದ ಚೋಟಾ ಅಹಮ್ಮದ್‌, ಕಾನೂನು ಸೇವೆ ಒದಗಿಸುವ ನೆಪದಲ್ಲಿ ಜನರಿಗೆ ವಂಚಿಸಿ ಹಣ ದೋಚಲು ಕಾಲ್‌ಸೆಂಟರ್ ಸ್ಥಾಪಿಸಿದ್ದ. ಇದಕ್ಕಾಗಿ 12 ಟೆಲಿಕಾಲರ್‌ಗಳನ್ನು ನೇಮಿಸಿಕೊಂಡಿದ್ದ. ಈ ವಂಚನೆ ಜಾಲಕ್ಕೆ ದುಬೈನಲ್ಲಿ ನೆಲೆಸಿರುವ ಚೋಟಾ ಅಹಮ್ಮದ್‌ ಸೋದರ ಮಾಸ್ಟರ್‌ ಮೈಂಡ್‌ ಆಗಿದ್ದು, ದುಬೈನಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನಕಲಿ ಕಂಪನಿಗಳನ್ನು ಸ್ಥಾಪಿಸಿ ಜನರಿಗೆ ವಂಚಿಸಿ ಹಣ ದೋಚುತ್ತಿರುವುದು ಗೊತ್ತಾಗಿದೆ. ದೇಶ ವ್ಯಾಪಿ 29 ಪ್ರಕರಣಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *