ಚಾಮರಾಜನಗರದ ಗುಂಡ್ಲುಪೇಟೆ ತಾಲೂಕು ಚೌಡಹಳ್ಳಿ ಗ್ರಾಮದಲ್ಲಿನ ಗುರುಮಲ್ಲೇಶ್ವರ ಶಾಖಾಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡಿದ್ದ ಬಸವ ತತ್ವ ಪ್ರಚಾರಕರಾಗಿದ್ದ ನಿಜಲಿಂಗ ಸ್ವಾಮೀಜಿ ಪೀಠ ತೊರೆದಿದ್ದಾರೆ.
ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು. ಪೂರ್ವಾಶ್ರಮದ ಹೆಸರು ಮಹಮದ್ ನಿಸಾರ್. ಮಹಮದ್ ನಿಸಾರ್ ಅವರು ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮ ದೀಕ್ಷೆ ಪಡೆದಿದ್ದರು. ಲಿಂಗದೀಕ್ಷೆ ಪಡೆದ ಬಳಿಕ ಮಹಮದ್ ನಿಸಾರ್ ಅವರಿಗೆ ನಿಜಲಿಂಗ ಸ್ವಾಮೀಜಿ ಅಂತ ಮರುನಾಮಕರಣ ಮಾಡಲಾಗಿತ್ತು.
ಶಾಖಾಮಠ ಮಠದ ನೂತನ ಕಟ್ಟಡ ಕಟ್ಟಿಸಿದ್ದ ಮಹದೇವ ಪ್ರಸಾದ್ ಎಂಬುವರು ಒಂದುವರೆ ತಿಂಗಳ ಹಿಂದೆ ಸ್ವಾಮೀಜಿಯೊಬ್ಬರ ಶಿಫಾರಿಸ್ಸಿನ ಮೇರೆಗೆ ನಿಜಲಿಂಗ ಸ್ವಾಮೀಜಿ ಅವರನ್ನು ಕರೆತಂದು ಮಠಾಧೀಶರನ್ನಾಗಿ ಮಾಡಿದ್ದರು.ಕಳೆದ ಒಂದುವರೆ ತಿಂಗಳಿಂದ ಚೌಡಹಳ್ಳಿಯ ಗುರುಮಲ್ಲೇಶ್ವರ ಮಠದಲ್ಲಿ ಪ್ರವಚನ ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದರು.
ಮಠಾಧೀಶರಾಗಿದ್ದ ಅವರು ತಮ್ಮ ಮೂಲ ಧರ್ಮದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಹಾಗೂ ತಮ್ಮ ದಾಖಲೆಗಳಲ್ಲಿ ಮೂಲಧರ್ಮದ ಹೆಸರನ್ನೇ ಉಳಿಸಿಕೊಂಡಿರುವುದು ಬಹಿರಂಗವಾಗಿದೆ. ಸ್ವಾಮೀಜಿಯ ಈ ನಡೆ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಸ್ವಾಮೀಜಿ ಪೀಠತ್ಯಾಗ ಮಾಡಿ ಮಠದಿಂದ ಹೊರ ನಡೆದಿದ್ದಾರೆ.
ಭಕ್ತರೊಬ್ಬರು ಸ್ವಾಮೀಜಿಯ ಮೊಬೈಲ್ನಲ್ಲಿನ ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ನೋಡಿದಾಗ, ಅದರಲ್ಲಿ ನಿಸಾರ್ ಮಹಮದ್ ಎಂದು ಇತ್ತು. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ವಾಮೀಜಿಯ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾನು ಅನ್ಯ ಧರ್ಮದವನಾದರೂ ಬಸವತತ್ವ ದಿಂದ ಆಕರ್ಷಿತನಾಗಿ ಜಂಗಮ ದೀಕ್ಷೆ ಪಡೆದಿದ್ದೇನೆ ಎಂದು ನಿಜಲಿಂಗ ಸ್ವಾಮೀಜಿ ಹೇಳಿದರು. ಗುಂಡ್ಲುಪೇಟೆ ಪೊಲೀಸರ ಮದ್ಯಸ್ಥಿಕೆಯಲ್ಲಿ ಸಭೆ ನಡೆಯಿತು. ಗ್ರಾಮಸ್ಥರಿಗೆ ಇಷ್ಟವಿಲ್ಲದಿದ್ದರೆ ತಾವು ಪೀಠದಲ್ಲಿ ಮುಂದುವರಿಯುವುದಿಲ್ಲ ಪೀಠತ್ಯಾಗ ಮಾಡುತ್ತೇನೆ ಎಂದು ನಿಜಲಿಂಗ ಸ್ವಾಮೀಜಿ ಯಾದಗಿರಿಗೆ ವಾಪಸ್ ತೆರಳಿದ್ದಾರೆ.