ಸಂಪುಟ ಪುನಾರಚನೆ, ಪವರ್ ಶೇರಿಂಗ್ ಎಲ್ಲವನ್ನು ತೀರ್ಮಾನ ಮಾಡುವುದು ಹೈಕಮಾಂಡ್. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ಎಂದು ಕಾದು ನೋಡೋಣ ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿರುವ ಸುದ್ದಿ ಬಗ್ಗೆ ಕೇಳಿದಾಗ, “ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಇದು ಸಿಎಂ ಹಾಗೂ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ. ಕಾದು ನೋಡೋಣ” ಎಂದರು.
ಸಂಪುಟ ಪುನಾರಚನೆ ಆದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಚರ್ಚೆ ಇದೆಯಲ್ಲ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಏನೇ ಇದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆಯೇ ಹೊರತು ಬೇರೆಯವರಲ್ಲ” ಎಂದು ಪ್ರತಿಕ್ರಿಯಿಸಿದರು.
ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ದೆಹಲಿಗೆ ಹೋಗಿದ್ದು, ನೀವೂ ತೆರಳುತ್ತಿರುವ ಕಾರಣ ಎಂದು ಕೇಳಿದಾಗ, ನಾನು ಈಗಾಗಲೇ ದೆಹಲಿಗೆ ತೆರಳಿರುವುದಾಗಿ ಮಾಧ್ಯಮಗಳು ಪ್ರಕಟಿಸಿವೆ. ನಾನು ದೆಹಲಿಗೆ ಹೋಗುವುದು ಹೊಸತಲ್ಲ. ಶಿವಕುಮಾರ್ ಅವರು ಅವರ ಕೆಲಸದ ಮೇಲೆ ಹೋಗಿದ್ದಾರೆ, ನನ್ನ ಪಾಡಿಗೆ ನಾನು ಹೋಗುತ್ತಿರುವೆ” ಎಂದು ತಿಳಿಸಿದರು.
ದೆಹಲಿಗೆ ಹೋದಾಗ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ದೆಹಲಿಗೆ ಹೋದಾಗ ಅವಕಾಶ ಸಿಕ್ಕರೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇನೆ” ಎಂದರು. ಕಾಯುವ ಸಮಯ ಮುಗಿದಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಆ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ನೀವು ಹೇಳುತ್ತಿದ್ದು, ಏನಾಗುತ್ತದೆಯೋ ಕಾದು ನೋಡೋಣ” ಎಂದು ತಿಳಿಸಿದರು.
ನಿಮ್ಮ ಸಹೋದರ ಸಿಎಂ ಆಗಬೇಕು ಎಂಬ ಆಸೆ ನಿಮ್ಮದು ಎಂದು ಕೇಳಿದಾಗ, “ಈ ವಿಚಾರ ಸಾಕಷ್ಟು ಬಾರಿ ಹೇಳಿದ್ದೇನೆ. ಎಲ್ಲದಕ್ಕೂ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಸಿಎಂ, ಸಚಿವರು, ಶಾಸಕರು, ಶಿವಕುಮಾರ್ ಎಲ್ಲರಿಗೂ ಹೈಕಮಾಂಡ್ ತೀರ್ಮಾನವೇ ಮುಖ್ಯ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಕಾದು ನೋಡಬೇಕು” ಎಂದು ಉತ್ತರಿಸಿದರು. ಪವರ್ ಶೇರಿಂಗ್ ಹಾಗೂ ಸಂಪುಟ ಪುನಾರಚನೆ ಚರ್ಚೆ ಬಗ್ಗೆ ಕೇಳಿದಾಗ, “ಎಲ್ಲವನ್ನೂ ಕಾದು ನೋಡೋಣ” ಎಂದು ತಿಳಿಸಿದರು.
ಶಿವಕುಮಾರ್ ಅವರ ಕ್ಲೇಮ್ ಮೇಲೆ ಎಲ್ಲವೂ ನಿಂತಿದೆಯಲ್ಲವೇ ಎಂದು ಕೇಳಿದಾಗ, “ಕಾದು ನೋಡೋಣ, ಇಲ್ಲಿ ಶಿವಕುಮಾರ್ ಒಬ್ಬರೇ ಕ್ಲೇಮ್ ಮಾಡುತ್ತಿಲ್ಲವಲ್ಲ. ಬಹಳಷ್ಟು ಜನರ ಕ್ಲೇಮ್ ಇದೆ. ಯಾರ ಕ್ಲೇಮ್ ಏನಿದೆಯೋ ಗೊತ್ತಿಲ್ಲವಲ್ಲ” ಎಂದರು.
ಸಂಪುಟ ಪುನಾರಚನೆಯಾದರೆ ಸಿಎಂ ಬದಲಾವಣೆ ಇಲ್ಲ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹಿರಿಯ ಸಚಿವರು, ಅವರು ಹೇಳುತ್ತಾರೆ. ಸಚಿವ ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ. ಹೈಕಮಾಂಡ್ ಅಪ್ಪಣೆಯೊಂದಿಗೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ ಶಿವಕುಮಾರ್ ಅವರ ಬಳಿ ಚರ್ಚೆ ಮಾಡಿದರೆ, ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಅಗತ್ಯವಾದ ಸಲಹೆ ನೀಡುತ್ತಾರೆ. ಸಿಎಂ ಈಗಾಗಲೇ ಇದ್ದಾರೆ. ಸಿಎಂ ಇಲ್ಲದಿದ್ದಾಗ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಬಹುದು” ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪವನ್ನು ಹೈಕಮಾಂಡ್ ಮುಂದೆ ಇಟ್ಟಿರುವ ಬಗ್ಗೆ ಕೇಳಿದಾಗ, “ಹೈಕಮಾಂಡ್ ಯಾವ ತೀರ್ಮಾನ, ಸಲಹೆಯನ್ನು ಶಿವಕುಮಾರ್ ಕೇಳುತ್ತಾರೆ. ಶಿವಕುಮಾರ್ ಅವರು ಮಾತ್ರವಲ್ಲ, ಎಲ್ಲರೂ ಕೇಳುತ್ತಾರೆ. ಅದರಲ್ಲಿ ಅನುಮಾನ ಬೇಡ. ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಬೇಕು ಎಂಬ ಆಸೆ ಶಿವಕುಮಾರ್ ಅವರಿಗಿಲ್ಲ. ಪಕ್ಷ ಮುಂದುವರಿಯಲು ಹೇಳಿದೆ, ಎಷ್ಟು ದಿನ ಅವಕಾಶ ನೀಡುತ್ತಾರೋ ಅಷ್ಟು ದಿನ ಪಕ್ಷದ ಕೆಲಸ ಮಾಡಿಕೊಂಡು ಇರುತ್ತಾರೆ ” ಎಂದು ಹೇಳಿದರು.
ಬಿಹಾರ ಚುನಾವಣೆ ಬಗ್ಗೆ ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲುವು ಸೋಲು ಇದ್ದೇ ಇರುತ್ತದೆ. ಬಿಹಾರದಲ್ಲಿ ಚುನಾವಣೆಗೂ ಮುನ್ನ ಎನ್ ಡಿಎ ಸರ್ಕಾರ ಕರ್ನಾಟಕ ಗ್ಯಾರಂಟಿ ಯೋಜನೆ ಮಾದರಿಯಲ್ಲೇ ಅನುಷ್ಠಾನ ಮಾಡಿತು. ಹೀಗಾಗಿ ಮಹಿಳಾ ಮತದಾರರು ಎನ್ ಡಿಎ ಪರ ಒಲವು ತೋರಿದ್ದಾರೆ. 10 ಸಾವಿರ ರೂ. ಒಟ್ಟಿಗೆ ಮಹಿಳೆಯರ ಖಾತೆಗೆ ಹಾಕಿದ ಪರಿಣಾಮ ಹಾಗೂ ಚುನಾವಣೆ ಮುನ್ನ 47 ಲಕ್ಷ ಮತಗಳನ್ನು ಮತಪಟ್ಟಿಯಿಂದ ಕಿತ್ತು ಹಾಕಿದ್ದು ಪ್ರಮುಖ ಕಾರಣವಾಗಿದೆ. ಜನ ತೀರ್ಪು ನೀಡಿದ್ದು, ಅದನ್ನು ಸ್ವಾಗತಿಸುತ್ತೇವೆ. ನಮ್ಮ ಪಕ್ಷಕ್ಕೆ ಸೋಲು, ಗೆಲುವು ಹೊಸತಲ್ಲ. ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಾ ಪಕ್ಷ ಸಂಘಟನೆ ಮಾಡುತ್ತೇವೆ” ಎಂದು ತಿಳಿಸಿದರು.


