Menu

ಹಗಲು ರಾತ್ರಿ ಪಕ್ಷ ಕಟ್ಟಿದ್ದೇನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ನೀಡಲಿ: ಡಿಕೆ ಶಿವಕುಮಾರ್

“ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನಲ್ಲ. ನಾನು ಹಗಲು ರಾತ್ರಿ ದುಡಿದು ಪಕ್ಷ ಕಟ್ಟಿದ್ದೇನೆ. ಮುಂದೆಯೂ ಕಟ್ಟುತ್ತೇನೆ” ಎಂದು ಡಿಸಿಎಂ ಡಿಕೆ. ಶಿವಕುಮಾರ್  ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೀರಿ ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ಕೇಳಿದಾಗ, “ನನ್ನ ಮಾನಸಿಕ, ದೈಹಿಕ ಹಾಗೂ ರಾಜಕೀಯ ಆರೋಗ್ಯ ಸರಿಯಾಗಿದೆ. ನಾನು ಖರ್ಗೆ ಸಾಹೇಬರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ಡಿಸೆಂಬರ್ ತಿಂಗಳ ಒಳಗಾಗಿ ನೂರು ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲೇಬೇಕಾಗಿದೆ. ಗಾಂಧಿ ಭಾರತ ಎಂಬ ಪುಸ್ತಕ ರಚಿಸಿದ್ದೇನೆ. ಇದರ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕಾಗಿದೆ. ಸದ್ಯದಲ್ಲೇ ಸಂಸತ್ ಅಧಿವೇಶನ ಆರಂಭವಾಗಲಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ ಮಾಡಬೇಕು. ಇದೆಲ್ಲವನ್ನು ಯಾರು ಮಾಡಬೇಕು? ನಾನೇ ಮಾಡಬೇಕು. ನಾನೇಕೆ ರಾಜಿನಾಮೆ ನೀಡಲಿ. ಈಗ ಅಂತಹ ಸಂದರ್ಭವಿಲ್ಲ” ಎಂದು ಉತ್ತರಿಸಿದರು.

“ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೂ ಈ ಸ್ಥಾನದಲ್ಲಿ ಕೆಲಸ ಮಾಡಲು ಹೇಳುತ್ತಾರೋ ಅಲ್ಲಿಯವರೆಗೆ ನಾನು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಮುಂದೆಯೂ ಪಕ್ಷ ಅಧಿಕಾರಕ್ಕೆ ಬರುವಂತೆ ದುಡಿಯುವವನು ನಾನು” ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯಾಗುತ್ತಿದೆ, ಖರ್ಗೆ ಅವರ ಭೇಟಿ ವೇಳೆ ಈ ಬಗ್ಗೆ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, “ಅದೆಲ್ಲಾ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಹೈಕಮಾಂಡ್ ಬಳಿ ಚರ್ಚೆ ಮಾಡುತ್ತಾರೆ. ನನ್ನನ್ನು ಕರೆದರೆ ನಾನು ಹೋಗುತ್ತೇನೆ. ನಾನು ಕೇವಲ ಪಕ್ಷದ ಕಚೇರಿಗಳ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಲು ಹೋಗುತ್ತಿರುವೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟಾಗಿ ಶಂಕುಸ್ಥಾಪನೆ ಮಾಡಬೇಕು ಎಂಬುದು ನನ್ನ ಆಸೆ. ಡಿ. 1 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ, ಯಾವುದಾದರೂ ವಾರಾಂತ್ಯದಲ್ಲಿ ಬಂದು ಹೋಗಿ ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

“ಕಾಂಗ್ರೆಸ್ ಕಚೇರಿ ನಿರ್ಮಾಣದ ಕಟ್ಟಡ ನಕ್ಷೆ ಅನುಮೋದನೆಗೆ ನಾನು ₹2.30 ಕೋಟಿ ಹಣವನ್ನು ಪಾವತಿಸುತ್ತಿದ್ದೇನೆ. ರಾಮಲಿಂಗಾರೆಡ್ಡಿ ಅವರ ಮುಂದಾಳತ್ವದಲ್ಲಿ ಒಂದು ಕಚೇರಿ ನಿರ್ಮಿಸಲಾಗುತ್ತಿದೆ. 75-80 ಕಡೆ ಕಚೇರಿ ನಿರ್ಮಾಣಕ್ಕೆ ಜಾಗ ಕೂಡ ಸಿದ್ಧವಾಗಿವೆ. ನೂರು ಕಚೇರಿ ನಿರ್ಮಾಣ ಕಾರ್ಯ ಮಾಡುತ್ತೇವೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *