ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಭಾರತವು ಹಣಕಾಸು ನೆರವು ಒದಗಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟವರ್ತಿ, ಶ್ವೇತಭವನದ ಉಪ ಮುಖ್ಯಸ್ಥ ಸ್ಟೀಫನ್ ಮಿಲ್ಲರ್ ಟೀಕಿಸಿದ್ದಾರೆ.
ರಷ್ಯಾದಿಂದ ಭಾರತವು ಕಚ್ಚಾತೈಲ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸು ನೆರವು ಒದಗಿಸುತ್ತಿದೆ. ರಷ್ಯಾದಿಂದ ತೈಲ ಖರೀದಿ ವಿಷಯದಲ್ಲಿ ಭಾರತವು ಚೀನಾದ ಜೊತೆಗೂ ಸಂಬಂಧ ಹೊಂದಿದೆ ಎಂಬುದು ಕಳವಳಕಾರಿ ಸಂಗತಿ ಎಂದು ಹೇಳಿದ್ದ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಭಾರತ ತೈಲ ಖರೀದಿ ಮುಂದುವರಿಸಿದೆ, ಇದು ಸರಿಯಲ್ಲ ಎಂದು ಸ್ಟೀಫನ್ ಮಿಲ್ಲರ್ ಹೇಳಿದ್ದಾರೆ.
ಈ ನಡುವೆ ಟ್ರಂಪ್ ಮತ್ತೊಮ್ಮೆ ಭಾರತ-ಪಾಕ್ ಯುದ್ಧ ನಿಲ್ಲಿಸುದ್ದು ನಾನೇ ಎಂದು ಬೀಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸೇನಾ ಸಂಘರ್ಷವನ್ನು ನಿಲ್ಲಿಸಿದ್ದು ನಾವೇ. ಸಂಘರ್ಷದ ವೇಳೆ ರಾತ್ರಿ ದೀರ್ಘಕಾಲ ವಾಷಿಂಗ್ಟನ್ ಮಧ್ಯಸ್ಥಿಕೆ ವಹಿಸಿ ನಡೆಸಿದ ಮಾತುಕತೆಯ ಫಲವಾಗಿ ಉಭಯ ದೇಶಗಳು ತಕ್ಷಣ ಮತ್ತು ಪೂರ್ಣಪ್ರಮಾಣದ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದವು ಎಂದು ಟ್ರಂಪ್ ಹೇಳಿದ್ದಾರೆ.