ನವದೆಹಲಿ: ಕೇಂದ್ರ ಸರ್ಕಾರ ಪ್ರಮುಖ ಔಷಧೀಯ ಕಂಪನಿಗಳಿಂದ ಮಾರಾಟವಾಗುವ 35 ಅಗತ್ಯ ಔಷಧಗಳ ಬೆಲೆಗಳನ್ನು ಕಡಿತಗೊಳಿಸಿದೆ.
ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯವು ಆ್ಯಂಟಿ-ಇನ್ಫಾಮೆಂಟರಿ, ಹೃದಯ ಸಂಬಂಧಿ, ಆ್ಯಂಟಿಬಯೋಟಿಕ್, ಆ್ಯಂಟಿ-ಡಯಾಬೆಟಿಕ್, ಮತ್ತು ಸೈಕಿಯಾಟ್ರಿಕ್ ಔಷಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಔಷಧಗಳ ಬೆಲೆ ಕಡಿತವನ್ನು ಪ್ರಕಟಿಸಿದೆ.
ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಹೊರಡಿಸಿದ ಬೆಲೆ ಆದೇಶದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದು ಗ್ರಾಹಕರಿಗೆ, ವಿಶೇಷವಾಗಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವವರಿಗೆ ಪರಿಹಾರ ನೀಡುವ ನಿರೀಕ್ಷೆಯಿದೆ.
ಇತ್ತೀಚಿನ ಬೆಲೆ ನಿಯಂತ್ರಣ ಆದೇಶದಲ್ಲಿ, ಏಸ್ಕೊಫೈನಾಕ್, ಪ್ಯಾರಸಿಟಮಾಲ್ ಮತ್ತು ಟ್ರಿಪ್ಸಿನ್ ಕೈಮೊಟ್ರಿಪ್ಸಿನ್; ಅಮೋಕ್ಸಿಸಿಲಿನ್ ಮತ್ತು ಪೊಟ್ಯಾಸಿಯಂ ಕ್ಲವುಲನೇಟ್; ಅಟೊರ್ವಾಸ್ಟಾಟಿನ್ ಸಂಯೋಜನೆಗಳು; ಹಾಗೂ ಎಂಪಾಗ್ಲಿಫ್ಲೋಜಿನ್, ಸಿಟಾಗ್ಲಿಪ್ಟಿನ್, ಮತ್ತು ಮೆಟ್ಫಾರ್ಮಿನ್‌ನಂತಹ ಹೊಸ ಓರಲ್ ಆ?ಯಂಟಿ-ಡಯಾಬೆಟಿಕ್ ಸಂಯೋಜನೆಗಳಂತಹ ನಿಗದಿತ ಪ್ರಮಾಣದ ಸಂಯೋಜನೆಗಳನ್ನು ಒಳಗೊಂಡಿದೆ.
ಅಕುಮ್ಸ್ ಡ್ರಗ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಮತ್ತು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮಾರಾಟ ಮಾಡುವ, ಏಸ್ಕೊಫೈಫೆನಾಕ್, ಪ್ಯಾರಸಿಟಮಾಲ್ ಮತ್ತು ಟ್ರಿಪ್ಸಿನ್ ಕೈಮೊಟ್ರಿಪ್ಸಿನ್ ಒಳಗೊಂಡ ಒಂದು ಟ್ಯಾಬ್ಲೆಟ್‌ನ ಬೆಲೆಯನ್ನು 13 ರೂ.ಗೆ ನಿಗದಿಪಡಿಸಲಾಗಿದೆ.
ಇದೇ ಮಾದರಿಯ ಔಷಧವನ್ನು ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಮಾರಾಟ ಮಾಡುತ್ತಿದ್ದು, ಇದರ ಬೆಲೆಯನ್ನು ಈಗ ರೂ. 15.01ಕ್ಕೆ ನಿಗದಿಪಡಿಸಲಾಗಿದೆ. ಅಂತೆಯೇ, ಹೃದಯ ಸಂಬಂಧಿ ಕಾಯಿಲೆಗಳಿಗೆ ಸಾಮಾನ್ಯವಾಗಿ ಸೂಚಿಸಲಾಗುವ 40 ಮಿಲಿಗ್ರಾಂ ಅಟೊರ್ವಾಸ್ಟಾಟಿನ್ ಮತ್ತು 75 ಮಿ.ಗ್ರಾಂ ಕ್ಲೋಪಿಡೋಗ್ರೆಲ್ ಸಂಯೋಜನೆಯ ಟ್ಯಾಬ್ಲೆಟ್ ಬೆಲೆಯನ್ನು ರೂ. 25.61ಕ್ಕೆ ಇಳಿಸಲಾಗಿದೆ.
ಶಿಶು ವೈದ್ಯಕೀಯ ಬಳಕೆಗಾಗಿ ಓರಲ್ ಸಸ್ಪೆನ್ಶನ್, ಸೆಫಿಕ್ಸಿಮ್ ಮತ್ತು ಪ್ಯಾರಸಿಟಮಾಲ್ ಸಂಯೋಜನೆಗಳು, ವಿಟಮಿನ್ ಡಿ ಪೂರಕಕ್ಕಾಗಿ ಕೋಲೆಕ್ಯಾಲ್ಸಿಫೆರಾಲ್ ಡ್ರಾಪ್ಸ್, ಮತ್ತು ಪ್ರತಿ ಮಿ.ಲೀ.ಗೆ ರೂ. 31.77 ದರ ಇದೆ. ಡೈಕ್ಲೋಫೆನಾಕ್ ಇಂಜೆಕ್ಷನ್‌ನತಂಹ ನಿರ್ಣಾಯಕ ಔಷಧಿಗಳನ್ನೂ ಇದರಲ್ಲಿ ಸೇರಿಸಲಾಗಿದೆ.
ಅಧಿಕೃತ ಆದೇಶದ ಪ್ರಕಾರ, ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರು ತಮ್ಮ ಸಂಸ್ಥೆಗಳಲ್ಲಿ ನವೀಕರಿಸಿದ ಬೆಲೆ ಪಟ್ಟಿಗಳನ್ನು ಪ್ರಮುಖವಾಗಿ ಪ್ರದರ್ಶಿಸಬೇಕು. ಸೂಚಿಸಿದ ಬೆಲೆಗಳನ್ನು ಪಾಲಿಸದಿದ್ದರೆ, ಡ್ರಗ್ಸ್ (ಬೆಲೆ ನಿಯಂತ್ರಣ) ಆದೇಶ 2013, ಮತ್ತು ಅಗತ್ಯ ಸರಕುಗಳ ಕಾಯ್ದೆ, 1955ರ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ. ಈ ದಂಡಗಳು ಬಡ್ಡಿದರಗಳೊಂದಿಗೆ ಹೆಚ್ಚುವರಿ ಶುಲ್ಕದ ವಸೂಲಾತಿಯನ್ನು ಸಹ ಒಳಗೊಂಡಿರುತ್ತವೆ.