ಮಡಿಕೇರಿ ಸಮೀಪದ ಸಿಂಕೋನ ಎಂಬಲ್ಲಿ ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ನಿವಾಸಿ ಕೀರ್ತನ್ (36) ಎಂಬಾತ ಪತ್ನಿಗೆ ವೀಡಿಯೊ ಕಾಲ್ ಮಾಡಿ ಲೈವ್ ಆಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಕೀರ್ತನ್ ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ತವರಿನಲ್ಲಿದ್ದ ಪತ್ನಿ ಜ್ಯೋತಿಯನ್ನು ಮನೆಗೆ ಕರೆದಿದ್ದು ಆಕೆ ಬರಲಿಲ್ಲ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಶನಿವಾರ ಸಂಜೆ ಸಂಜೆ ವೀಡಿಯೊ ಕಾಲ್ ಮಾಡಿ ಆತ್ಮಹತ್ಯೆ ಮಾಡುತ್ತಿರುವುದನ್ನು ಲೈವ್ ಆಗಿ ತೋರಿಸಿದ್ದ, ಕಾಫಿ ತೋಟದಲ್ಲಿ ಆತನ ಶವ ಪತ್ತೆಯಾಗಿದೆ. ಈ ಹಿಂದೆ ಕೂಡ ಆತ ಸಾಕಷ್ಟು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ: ಮನೆಯಲ್ಲಿದ್ದ ವೃದ್ಧೆ ಬಲಿ
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಮನೆಯಲ್ಲಿದ್ದ ವೃದ್ಧ ಮಹಿಳೆ ಮೃತಪಟ್ಟಿದ್ದಾರೆ. ಫಕ್ಕೀರವ್ವ ರಾಮಣ್ಣ ಆಲೂರು (70) ಬೆಂಕಿಯಲ್ಲಿ ಸಜೀವ ದಹನಗೊಂಡವರು.
ಮನೆಯಲ್ಲಿ ಸಂಬಂಧಿಕರು ಬಂಧು-ಬಳಗ ಇಲ್ಲದೆ ಒಂಟಿಯಾಗಿ ಅವರು ಜೀವನ ನಡೆಸುತ್ತಿದ್ದರು. ವೃದ್ಧೆ ಫಕ್ಕೀರವ್ವ ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಬಟ್ಟೆಗೆ ಹರಡಿ ದೇಹ ಸಂಪೂರ್ಣವಾಗಿ ಸುಟ್ಟುಹೋಗಿದ್ದಾರೆ. ಅರೆಜೀವದಲ್ಲಿದ್ದ ಅವರನ್ನು ನೋಡಿ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.
ಫಕ್ಕೀರವ್ವ ಅವರನ್ನು ತಕ್ಷಣ 108 ಆಂಬುಲೆನ್ಸ್ ಮೂಲಕ ಮುಂಡಗೋಡ ತಾಲೂಕು ಆಸ್ಪತ್ರೆಗೆ ಕಳಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ವರ್ಗಾಯಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


