ಮೈಸೂರು ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ. ಹೆಚ್ಚು ಮಾರ್ಕ್ಸ್ ನೀಡ್ತೇನೆ, ಒಳ್ಳೆಯ ಕೆಲಸ ಕೊಡಿಸುತ್ತೇನೆ. ಹೊರಗಡೆ ಪಬ್ಗೆ ಹೋಗಿ ಮಜಾ ಮಾಡೋಣ ಬಾ ಎಂದು ಉಪನ್ಯಾಸಕ ಭರತ್ ಭಾರ್ಗವ ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿ ಮಹಿಳಾ ಉಪನ್ಯಾಸಕರ ಬಳಿ ದೂರಿದ್ದಳು. ಈ ವಿಚಾರಕ್ಕೆ ವಿದ್ಯಾರ್ಥಿನಿಗೆ ಕರೆ ಮಾಡಿದ್ದ ಉಪನ್ಯಾಸಕ ಭರತ್ ಭಾರ್ಗವ, ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ತನ್ನ ಖಾಸಗಿ ಅಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿ, ಉಪನ್ಯಾಸಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ. ದೂರಿನ ಅನ್ವಯ ಉಪನ್ಯಾಸಕನ ವಿರುದ್ಧ BNS ಸೆಕ್ಷನ್ 126(2), 75(2), 351(2)ನಡಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ರಪ್ತ ವಯಸ್ಕ ಬಾಲಕಿ ಮೇಲೆ ಮನೆ ಮಾಲೀಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯವರು ಪಕ್ಕದ ಮನೆಯಲ್ಲಿ ಮಗಳನ್ನು ಬಿಟ್ಟು ಹೊರ ಹೋಗಿದ್ದರು, ಈ ವೇಳೆ ಮನೆಯ ಮಹಿಳೆ ಮನೆಯ ಮಾಲೀಕನನ್ನು ಕರೆಸಿದ್ದಾಳೆ. ಆತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ಮಹಿಳೆಯೂ ಇದಕ್ಕೆ ಸಾಥ್ ನೀಡಿರುವುದಾಗಿ ಹೇಳಲಾಗಿದೆ.
ಹೊಟ್ಟೆನೋವು ಎಂದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳಾದ ಚಂದ್ರಶೇಖರ ಮತ್ತು ಮಂಜೂರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ದ ಪೋಕ್ಸೋ ಮತ್ತು ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


